ಭಟ್ಕಳ: ತಾಲೂಕಿನ ತಲಗೋಡ ಸಮುದ್ರ ತೀರದ ಸುಂದರ ಪ್ರಕೃತಿ ವಾತಾವರಣದಲ್ಲಿ ನೆಲೆಸಿರುವ ಶ್ರೀ ನುಕ್ಕಿಹಿಂಡಿನ ಮಹಾಸತಿ ಮತ್ತು ಪರಿವಾರ ದೈವಸ್ಥಾನದ ಪುನಃ ಪ್ರತಿಷ್ಠಾಪನಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ನೆರವೇರಿತು.
ಪ್ರತಿಷ್ಠಾಪನಾ ಅಂಗವಾಗಿ ದೈವಸ್ಥಾನದಲ್ಲಿ ಗುರುಗಣೇಶ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಪ್ರತಿಷ್ಠಾ ಹೋಮ, ಜೀವಕುಂಭಾಭಿಷೇಕ, ಚತುರ್ವಿಂಶತಿ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಕಲಶಾಧಿವಾಸ ಹೋಮ, ಕಲಾತತ್ವ ಹೋಮ, ಪರಿವಾರ ದೇವರಿಗೆ ಅಧಿವಾಸ ಹೋಮ, ಪಂಚಾಮೃತಾಭಿಷೇಕ ಪೂರ್ವಕ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಬಳಿಕ ಭಕ್ತರಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪಂಚವಾದ್ಯ ಹಾಗೂ ಪೂರ್ಣಕುಂಭ ಮೆರವಣಿಗೆಯೊಂದಿಗೆ ತಾಯಿ ಮಹಾಸತಿ ದೇವಿಯ ಪ್ರಭಾವಳಿ ಮತ್ತು ಸ್ಥಳೀಯ ಭಕ್ತರ ದೇಣಿಗೆಯಿಂದ ತಯಾರಿಸಿದ ಚಿನ್ನದ ತಾಳಿ ಸಮೇತ ಬೆಳ್ಳಿಯ ಕರಿಮಣಿ ಹಾರವನ್ನು ಭಕ್ತಿಭಾವದಿಂದ ದೈವಸ್ಥಾನಕ್ಕೆ ತರಲಾಯಿತು.
ಕಾರ್ಯಕ್ರಮದಲ್ಲಿ ಕೆ.ಆರ್. ನಾಯ್ಕ, ಜಗದೀಶ ಮೊಗೇರ, ರಮೇಶ ಖಾರ್ವಿ, ದೇವನಾಯ್ಕ ನಾಯ್ಕ, ಶ್ರಿಧರ ನಾಯ್ಕ, ಹರಿಶ್ಚಂದ್ರ ನಾಯ್ಕ, ರೂಪಾ ಖಾರ್ವಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಮಹೋತ್ಸವವು ಕ್ಷೇತ್ರದ ಧಾರ್ಮಿಕ ಚೈತನ್ಯವನ್ನು ಮತ್ತಷ್ಟು ಬಲಪಡಿಸಿದ್ದು, ಭಕ್ತರಲ್ಲಿ ಆತ್ಮೀಯತೆ ಮತ್ತು ಭಕ್ತಿ ಭಾವ ಹೆಚ್ಚಿಸಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ