ಭಟ್ಕಳ: ಟ್ಯಾಕ್ಸಿ ಚಾಲಕರಿಂದ ಆಟೋ ರಿಕ್ಷಾ ಚಾಲಕರ ಮೇಲೆ ವಿನಾಕಾರಣ ದೌರ್ಜನ್ಯ ಮತ್ತು ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ, ಭಟ್ಕಳ ಆಟೋರಿಕ್ಷಾ ಚಾಲಕ–ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶನಿವಾರ ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಪಿಐ ದಿವಾಕರ್ ಪಿ.ಎಂ. ಅವರಿಗೆ ಮನವಿ ನೀಡಿದ ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ ಹಾಗೂ ಇತರರು, ಕಳೆದ ಒಂದು ವರ್ಷದಿಂದ ಕೆಲ ಟ್ಯಾಕ್ಸಿ ಚಾಲಕರು ಬಾಡಿಗೆಗೆ ತೆರಳುವ ಆಟೋಗಳನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಇಳಿಸುವಂತೆ ಒತ್ತಾಯಿಸುವುದು, ಚಾಲಕರಿಂದ ಹಣ ಕಸಿದುಕೊಳ್ಳುವುದು ಹಾಗೂ ಈ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದಾಗಿ ದೂರಿದರು.
ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 7 ಸಾವಿರ ಹಾಗೂ ಭಟ್ಕಳದಲ್ಲಿ 1600ಕ್ಕೂ ಹೆಚ್ಚು ಆಟೋ ರಿಕ್ಷಾಗಳಿವೆ. ಬಾಡಿಗೆ ಆಧಾರಿತ ಜೀವನ ನಡೆಸುತ್ತಿರುವ ಆಟೋ ಚಾಲಕರಿಗೆ ಈ ರೀತಿಯ ಕಿರುಕುಳದಿಂದ ಆತಂಕ ಸೃಷ್ಟಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಫೆ. 12ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಆಟೋ ಚಾಲಕರ ಸಮಸ್ಯೆಗಳ ಕುರಿತು ಚರ್ಚೆ ನಡೆದಿದ್ದು, ಅದರಲ್ಲಿ ಟ್ಯಾಕ್ಸಿ ಸಂಘದವರೂ ಭಾಗವಹಿಸಿದ್ದರು. ಆದರೂ ಕಿರುಕುಳ ನಿಲ್ಲದಿರುವುದು ವಿಷಾದನೀಯ ಎಂದು ಸಂಘದವರು ತಿಳಿಸಿದ್ದಾರೆ.
ಏಕಾಏಕಿ ವಾಹನಗಳನ್ನು ಅಡ್ಡಗಟ್ಟುವ ಘಟನೆಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಯಾವುದೇ ಕಾನೂನು ಆಧಾರವಿಲ್ಲದೆ ಈ ರೀತಿಯ ಕ್ರಮ ಕೈಗೊಳ್ಳುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇನ್ನು ಮುಂದೆ ಜಿಲ್ಲೆಯ ಯಾವುದೇ ಆಟೋ ಚಾಲಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ಪಿಐ ದಿವಾಕರ್ ಪಿ.ಎಂ. ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ/ಮಾಲಕರ ಕ್ಷೇಮಾಭಿವೃದ್ಧಿ ಸಂಘ ವಿಶ್ವನಾಥ ಗೌಡ,ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸಲೀಂ ಮಹ್ಮದ್,ಭಟ್ಕಳ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯ್ಕ,ಮುರುಡೇಶ್ವರ ಭಾಗದ ಅಧ್ಯಕ್ಷ
ಶ್ರೀಧರ ನಾಯ್ಕ,ಸೇರಿದಂತೆ ನೂರಾರು ಆಟೋ ಚಾಲಕರ ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ