March 2, 2026

ಮುರ್ಡೇಶ್ವರ ದೇವಸ್ಥಾನನಲ್ಲಿ ಮಹಾಶಿವರಾತ್ರಿ ವೈಭವ

ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಮುಂಜಾನೆ 3.30ರ ವೇಳೆಗೆ 5 ಸಾವಿರಕ್ಕೂ ಅಧಿಕ ಭಕ್ತರು ಮುರ್ಡೇಶ್ವರಕ್ಕೆ ಭೇಟಿ ನೀಡಿ ವಿಶೇಷ ಪೂಜೆ–ಪುನಸ್ಕಾರ ಸಲ್ಲಿಸಿ ದೇವರ ದರ್ಶನ ಪಡೆದರು.


ಶಿವನ ಪಂಚಕ್ಷೇತ್ರಗಳಲ್ಲೊಂದಾದ ಈ ಕ್ಷೇತ್ರದಲ್ಲಿ ಈ ಬಾರಿ ಮುಂಜಾನೆ 3 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ ದೇವಸ್ಥಾನದ ಹೊರಾಂಗಣದವರೆಗೂ ಭಕ್ತರ ದೀರ್ಘ ಸರದಿ ಸಾಲು ಕಂಡುಬಂತು.
ಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಪತ್ರ ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಸಮುದ್ರಸ್ನಾನ ಮಾಡಿ ದೇವರಿಗೆ ಅಭಿಷೇಕ ಸಲ್ಲಿಸುವ ಭಕ್ತರ ದೃಶ್ಯ ಗಮನಸೆಳೆಯಿತು. ದೂರದೂರಿನಿಂದ ಆಗಮಿಸಿದ ಭಕ್ತರು ಹಾಗೂ ಪ್ರವಾಸಿಗರು ಬೆಳಗ್ಗೆಯಿಂದಲೇ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಸಮುದ್ರತೀರ ಹಾಗೂ ದೇವಸ್ಥಾನದ ಸುತ್ತಮುತ್ತ ಜನಜಂಗುಳಿ ಕಂಡುಬಂತು.


ಪುರಾಣ ಪ್ರಸಂಗ
ಪುರಾಣಗಳ ಪ್ರಕಾರ, ರಾವಣನು ಶಿವನಿಂದ ಪಡೆದ ಆತ್ಮಲಿಂಗವನ್ನು ಗಣಪನು ಭೂಮಿಯಲ್ಲಿ ಪ್ರತಿಷ್ಠಾಪಿಸಿದ ಸ್ಥಳವೇ ಭೂಕೈಲಾಸವೆಂದು ಪ್ರಸಿದ್ಧಿಯಾದ ಗೋಕರ್ಣ. ನಂತರ ರಾವಣನು ಕೋಪದಿಂದ ಲಿಂಗವನ್ನು ಎಸೆದಾಗ ಅದು ಐದು ಕ್ಷೇತ್ರಗಳಾಗಿ ವಿಭಜನೆಯಾಗಿ ಶಿವನ ಪಂಚಕ್ಷೇತ್ರಗಳಾಗಿ ಪ್ರಸಿದ್ಧಿಯಾಯಿತು. ಅವುಗಳಲ್ಲಿ ಮುರ್ಡೇಶ್ವರ ಪ್ರಮುಖ ಕ್ಷೇತ್ರವಾಗಿದೆ.


ಅಂತರರಾಷ್ಟ್ರೀಯ ಖ್ಯಾತಿ
ಇಂದು ಮುರ್ಡೇಶ್ವರ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಪ್ರವಾಸಿ ಕೇಂದ್ರವಾಗಿಯೂ ಬೆಳೆಯುತ್ತಿದೆ. ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಭೇಟಿ ನೀಡುವುದು ಸಾಮಾನ್ಯ.


ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಟ್ಕಳ ಘಟಕದ ವತಿಯಿಂದ ಘೋಷ್ ವಾದನ ನಡೆಯಿತು. ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಮಾವಳ್ಳಿ ಪಂಚಾಯತ್‌ನ ಮಾಜಿ ಸದಸ್ಯ ಜಮೀದ್ದಾರ ಕೃಷ್ಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!