March 2, 2026

ಸಾಹಿತ್ಯ ಸಮಕಾಲೀನ ಇತಿಹಾಸವನ್ನು ತೋರಿಸುವುದು – ಸಾಹಿತಿ ಡಾ.ವಸಂತಕುಮಾರ ಪೆರ್ಲ.

ತಾಲೂಕಿನ ಅರೆಅಂಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶನಿವಾರ ಆಯೋಜಿಸಿದ ತಾಲೂಕಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಪ, ರನ್ನ, ಪೊನ್ನ ಮುಂತಾದವರು ಆ ಕಾಲದ ರಾಜಕೀಯ, ಸಾಂಸ್ಕೃತಿಕ, ಜನಜೀವನದ ಇತಿಹಾಸವನ್ನು ತಮ್ಮ ಕ್ರತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ಸಾಹಿತ್ಯವು ಕೂಡ ಇಂದಿನ ಜನಜೀವನದ ಪ್ರತಿಬಿಂಬವಾಗಿದೆ. ಸಮಾಜಕ್ಕೆ ಮಾರ್ಗದರ್ಶನ ಮಾಡಿ ಒಂದು ದಿಕ್ಕಿಗೆ ಒಯ್ಯುವುದು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳು. ಆದರೆ ಇವು ಅನಾದರಕ್ಕೆ ಒಳಗಾಗಿವೆ. ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿಯನ್ನು ಮನೆಯಲ್ಲಿ ಕಲಿಸದಿದ್ದರೆ ಅವರು ಕನ್ನಡದ ಭಾವೀ ಪ್ರತಿನಿಧಿಯಾಗಲು ಸಾಧ್ಯವಾಗುವುದಿಲ್ಲ. ಅವರು ಕನ್ನಡದ ಪ್ರತಿನಿಧಿಗಳಾಗಬೇಕಾದರೆ ಕನ್ನಡದ ಬೇರನ್ನು ಗಟ್ಟಿಗೊಳಿಸಬೇಕು ಎಂದರು.

ಶಾಸಕ ದಿನಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಭಾಷಿಕರು ಕನ್ನಡವನ್ನು ಉಳಿಸಿಕೊಳ್ಳಬೇಕು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸಾಹಿತ್ಯ ಸಮ್ಮೇಳನ ನಮ್ನ ಕ್ಷೇತ್ರದಲ್ಲಿ ನಡೆದಿರುವುದು ಹೆಮ್ಮೆ ತಂದಿದೆ ಎಂದರು.

ಸರ್ವಾದ್ಯಕ್ಷತೆ ವಹಿಸಿದ ಸುರೇಶ ನಾಯ್ಕ ಮಾತನಾಡಿ ಲೋಕಹಿತ ಕಾಯುವ ಸಾಹಿತ್ಯ ಕೃತಿಗಳು, ಕಾದಂಬರಿಗಳು, ಕಾವ್ಯ, ನಾಟಕ ಸದಾ ಜೀವಂತವಾಗಿರುತ್ತವೆ. ಕೇವಲ ಮಾನವನಷ್ಟೇ ಅಲ್ಲ. ಸಕಲ ಜೀವಿಗಳ ಬಗ್ಗೆಯೂ ಸಮದೃಷ್ಠಿ, ಸಮಚಿತ್ತ ಸಾಹಿತಿಗೆ ಅವಶ್ಯಕ. ಸಾಹಿತ್ಯದ ಕುರಿತು ಮಕ್ಕಳಲ್ಲಿ ಒಲವು ಮೂಡಿಸುವ ಮೂಲಕ ಕನ್ನಡ ಸಾಃಹಿತ್ಯ ಕ್ಷೇತ್ರವನ್ನು ಭವಿಷ್ಯದಲ್ಲಿ ಉನ್ನತಿಗೊಳಿಸಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ನಾಡ ಧ್ಚಜಾರೋಹಣ ನೆರವೇರಿಸಿ ಮಾತನಾಡಿ ಸರ್ಕಾರವು ಅನೇಕ ಉತ್ಸವಗಳಿಗೆ ಕೋಟಿ ಕೋಟಿ ರೂ. ಖರ್ಚು ಮಾಡುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷ ರೂ. ಕೊಡಲೂ ಹಿಂದೇಟು ಹಾಕುತ್ತದೆ. ಹಾಲಿವುಡ್, ಬಾಲಿವುಡ್ ಕಲಾವಿದರನ್ನು ಕರೆಯುಸಿ ಐವತ್ತು- ಅರವತ್ತು ಲಕ್ಷ ರೂ. ಕೊಡುತ್ತಾರೆ. ಇಲ್ಲಿಯ ಕಲಾವಿದರಿಗೆ ಇನ್ನೂರು ರೂ. ಕೊಡಲೂ ಆಗುತ್ತಿಲ್ಲ. ಇದು ಇಂದಿನ ದುಸ್ಥಿತಿ. ಆರಂಭದಿಂದಲೂ ಕನ್ನಡದ ಕೆಲಸವನ್ನು ಚಾಚೂತಪ್ಪದೇ ಮಾಡುತ್ತಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಪರಿಷತ್ತಿನಿಂದ ಉಪಯುಕ್ತ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ ಕನ್ನಡದ ಅಭಿಮಾನ ಪ್ರತಿಯೊಬ್ಬರಲ್ಲೂ ಗಟ್ಟಿಯಾಗಿ ನೆಲೆಗೊಳ್ಳಬೇಕು ಎಂದರು.

ಹೊನ್ನಪ್ಪಯ್ಯ ಗುನಗಾ ಸರ್ವಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು. ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ, ರಾಮ ಗೊಂಡ, ನಿಶಾಂತ ನಾಯ್ಕ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರಶಾಂತ ಹೆಗಡೆ ಪುಸ್ತಕ ಪರಿಚಯಿಸಿದರು‌.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಅಣ್ಣಪ್ಪ ನಾಯ್ಕ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮರ್ತುಜಾ ಹುಸೇನ್, ವಿ.ಎಸ್‌ಎಸ್. ಅಧ್ಯಕ್ಷ ಸುರೇಶ ಶೆಟ್ಟಿ, ಬಿಇಒ ವಿನಾಯಕ ಅವಧಾನಿ, ನಿವೃತ್ತ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ವಿನಾಯಕ ಮೇಸ್ತ ಇತರರಿದ್ದರು‌

ತಹಸೀಲ್ದಾರ ಪ್ರವೀಣ ಕರಾಂಡೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಎಸ್.ಎಸ್.ಕೆ.ಪಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಜಿ.ಪಂ.ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಗೋಷ್ಠಿಗಳು, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ನಡೆದವು.

About The Author

error: Content is protected !!