March 1, 2026

ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಬೇಕು. ಗುರು ಹಿರಿಯರು ಹಾಗೂ ತಂದೆ ತಾಯಿಗಳನ್ನು ಭಕ್ತಿ ಭಾವದಿಂದ ಕಾಣಬೇಕು – ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್.

ಕೃಷ್ಣರಾಜಪೇಟೆ: ಪಟ್ಟಣದ ಪ್ರಿಯದರ್ಶನಿ ಆಂಗ್ಲ ಮಾಧ್ಯಮ ಶಾಲೆಯ 36ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಿಯೋತ್ಸವ -2026 ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕಳೆದ 35 ವರ್ಷಗಳಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಭವಿಷ್ಯದ ನಾಯಕರನ್ನಾಗಿ ರೂಪಿಸುತ್ತಿರುವ ಪ್ರಿಯದರ್ಶಿನಿ ಶಾಲೆಯು ಹಲವಾರು ಎಡರು ತೊಡರುಗಳ ನಡುವೆಯೂ 35 ವರ್ಷಗಳನ್ನು ಸಂಪೂರ್ಣಗೊಳಿಸಿ 36ನೇ ವರ್ಷಕ್ಕೆ ಕಾಲಿಟ್ಟಿದೆ. ಶಾಲೆಯ ಸಂಸ್ಥಾಪಕರಾದ ಮಹಿಳಾ ಹೋರಾಟಗಾರ್ತಿ ದಿವಂಗತ ತಾರಾಕಿರಣ್ ಅವರ ಸತತ ಪರಿಶ್ರಮದ ಫಲವಾಗಿ ಪ್ರಿಯದರ್ಶಿನಿ ಶಾಲೆಯನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಿ ಸಾಧನೆ ಮಾಡಲು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಅಭಿಮಾನದಿಂದ ತಿಳಿಸಿದ ಚಂದ್ರಶೇಖರ್ ಪೋಷಕರು ಹಾಗೂ ತಂದೆ ತಾಯಿಗಳು ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಕಂಡು ಸಂಭ್ರಮಿಸುತಿದ್ದಾರೆ ಕೃಷ್ಣರಾಜಪೇಟೆ ತಾಲೂಕಿನ ಸಾವಿರಾರು ಮಕ್ಕಳು ಇಂದು ಮೂಡಬಿದರೆ ಮಂಗಳೂರು ಸೇರಿದಂತೆ ವಿವಿಧ ಕಾಲೇಜುಗಳಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಶಿಕ್ಷಣ ಕೊಡಿಸುತ್ತಿದ್ದಾರೆ ಕೃಷ್ಣರಾಜಪೇಟೆ ತಾಲೂಕಿನಲ್ಲಿಯೇ ಒಂದು ಹೈಟೆಕ್ ಶಾಲೆಯು ನಿರ್ಮಾಣವಾದರೆ ನಮ್ಮ ತಾಲೂಕಿನ ವಿದ್ಯಾರ್ಥಿಗಳೆಲ್ಲರೂ ನಮ್ಮೂರಿನಲ್ಲಿಯೇ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾಜ ಸೇವಕರು ಹಾಗೂ ರಾಜ್ಯ ರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾತನಾಡಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಆದ್ದರಿಂದ ವಿದ್ಯಾರ್ಥಿಗಳು ಸತತವಾದ ಪರಿಶ್ರಮ ಹಾಗೂ ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು. ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮಿಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವ ಸಂಸ್ಥಾನದ ಶಿವಾನಂದ ಮಹಾರಾಜ್ ಸ್ವಾಮೀಜಿ, ವಕೀಲರಾದ ದೇವಾನಂದ್, ಸಮಾಜ ಸೇವಕ ಸಯ್ಯದ್ ವಾಜಿದ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ. ಎಸ್ ರಾಜೇಶ್, ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ದೇವರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಶಾಲೆಯ ಆಡಳಿತಾಧಿಕಾರಿ ಮೋಹನ್ ಚಂದ್ರ, ಕಾರ್ಯದರ್ಶಿ ಸಹನಾ ಸೇರಿದಂತೆ ನೂರಾರು ಜನರು ಹಾಗೂ ಮಕ್ಕಳ ಪೋಷಕರು ಪ್ರಿಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಾಟೆ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!