March 1, 2026

ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ

ಕೆ.ಆರ್.ಪೇಟೆ : ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ ನಾಗೇಂದ್ರ ಕುಮಾರ್..

ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಕರುಣಿಸಿ ಆಶೀರ್ವದಿಸುತ್ತಿರುವ ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ದೇವಸ್ಥಾನವನ್ನು ಹೊಸಹೊಳಲು ಗ್ರಾಮದಲ್ಲಿ ನಿರ್ಮಿಸಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ ಎಂದು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರ ಕುಮಾರ್ ಹೇಳಿದರು.

ಅವರು ಮಹಾಶಿವರಾತ್ರಿ ಅಮಾವಾಸ್ಯೆ ಅಂಗವಾಗಿ ಇಂದು ಹೊಸಹೊಳಲು ಗ್ರಾಮದ ಕರಿಬಸವ ಅಜ್ಜಯ್ಯನ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರಿಬಸವ ಅಜ್ಜಯ್ಯನ ದರ್ಶನ ಮಾಡಲು ರಾಣೇಬೆನ್ನೂರಿನ ಉಕ್ಕಡಗಾತ್ರಿ ಸುಕ್ಷೇತ್ರಕ್ಕೆ ಹೋಗಲು ಈ ಭಾಗದ ಭಕ್ತಾದಿಗಳು 350 ಕಿಲೋಮೀಟರ್ ಹೆಚ್ಚು ದೂರ ಪ್ರಯಾಣ ಮಾಡಬೇಕಾಗಿತ್ತು ಆದರೆ ಇಂದು ರಮೇಶ್ ಅಜ್ಜಯ್ಯ ಅವರು ಹೊಸಹೊಳಲು ಗ್ರಾಮದಲ್ಲಿ ಉಕ್ಕಡಗಾತ್ರಿ ಕರಿಬಸವ ಅಜ್ಜಯ್ಯನ ಅಮೃತಶಿಲೆಯ ಮೂರ್ತಿಯನ್ನು ಸ್ಥಾಪಿಸಿ ನೂತನ ದೇವಾಲಯವನ್ನು ನಿರ್ಮಾಣ ಮಾಡಿ ಅಜ್ಜಯ್ಯನ ಸದ್ಭಕ್ತರು ಹೊಸ ಹೊಡಲು ಗ್ರಾಮದಲ್ಲಿಯೇ ದರುಶನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸಂತೋಷದ ವಿಷಯವಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ನೆಮ್ಮದಿ ಹಾಗೂ ಆತ್ಮ ಸಂತೋಷವನ್ನು ಪಡೆಯಲು ಸಾಧ್ಯವಿದೆ. ತಾಲೂಕಿನ ಪ್ರತಿ ಮನೆ ಹಾಗೂ ಮನಗಳಲ್ಲಿಯೂ ಧಾರ್ಮಿಕ ಜಾಗೃತಿಯನ್ನು ಮೂಡಿಸಲು ಉತ್ತರ ಕರ್ನಾಟಕದ ಕರಿಬಸವ ಅಜ್ಜಯ್ಯನನ್ನು ಹೊಸಹೊಳಲು ಗ್ರಾಮಕ್ಕೆ ಕರೆತಂದಿರುವ ರಮೇಶ್ ಅಜ್ಜಯ್ಯ ಅವರ ಧಾರ್ಮಿಕ ಜಾಗೃತಿ ಸಂದೇಶ ಕಾರ್ಯಕ್ರಮವನ್ನು ನಾನು ಅಭಿನಂದಿಸಿ, ಅಜ್ಜಯ್ಯನ ದರ್ಶನ ಪಡೆದು ಪುಳಕಿತನಾಗಿದ್ದೇನೆ ಎಂದು ನಾಗೇಂದ್ರ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಕರವೇ ತಾಲೂಕು ಸಂಚಾಲಕ ಹೊಸ ಹೊಳಲು ಗೋಪಿ, ತಾಲೂಕು ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಕಾಡುಮೆಣಸ ಚಂದ್ರು , ಮುಸ್ಲಿಂ ಸಮಾಜದ ಮುಖಂಡರಾದ ಸೈಯದ್ ಕಲೀಲ್, ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್, ಹೆಚ್.ಎನ್.ಪ್ರವೀಣ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸದ್ಭಕ್ತರಿಗೂ ಅನ್ನಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!