ಭಟ್ಕಳ: ವಿವಿಧ ಇಲಾಖೆಗಳ ಅನುದಾನ ಸರಿಯಾಗಿ ಬಳಕೆಯಾಗಬೇಕು. ಮಂಜೂರಾದ ಹಣ ವಾಪಸ್ಸಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.

ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ (20 ಅಂಶ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ–ಅಂಕೋಲಾದಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯತ್ಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದರು.
“ಮುಂದಿನ ತಿಂಗಳಲ್ಲಿ ಸುಮಾರು ₹4 ಲಕ್ಷ ಕೋಟಿ ವೆಚ್ಚದ ಬಜೆಟ್ ಮಂಡನೆಯಾಗಲಿದೆ. ಅದು ಜನರ ತೆರಿಗೆ ಹಣ. ಅದರ ಸದುಪಯೋಗವಾಗಬೇಕು ಎಂಬ ಅರಿವು ಎಲ್ಲರಲ್ಲೂ ಇರಬೇಕು,” ಎಂದು ಹೇಳಿದರು.
ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನ
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅರುಣ ಕುಮಾರ ಅವರ ಸೇವೆಯನ್ನು ಸಚಿವರು ಶ್ಲಾಘಿಸಿದರು. ರೋಗಿಗಳು ಹೊರಗಡೆಯಿಂದ ಔಷಧಿ ಖರೀದಿಸುವಂತಾಗಬಾರದು ಎಂದು ಸೂಚಿಸಿ, ಆರೋಗ್ಯ ರಕ್ಷಾ ಸಮಿತಿಯ ಮೂಲಕ ಔಷಧಿ ಖರೀದಿ ಕುರಿತು ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೇಳಿದರು. ದಿನಕ್ಕೆ ಸುಮಾರು ₹10 ಸಾವಿರ ಮೌಲ್ಯದ ಔಷಧಿ ವಿತರಣೆ ನಡೆಯುತ್ತಿದೆ ಎಂದು ಡಾ. ಅರುಣ ಕುಮಾರ ಮಾಹಿತಿ ನೀಡಿದರು.
ಗ್ರೂಪ್ ‘ಡಿ’ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ಬಾಕಿ ಇರುವ ಕುರಿತು ತಕ್ಷಣ ಡಿ.ಎಚ್.ಒ.ಗೆ ಕರೆ ಮಾಡಿ ಪರಿಹಾರಕ್ಕೆ ಸೂಚನೆ ನೀಡಿದರು. ಕಾಲುಬಾಯಿ ರೋಗಕ್ಕೆ 95 ಶೇಕಡಾ ಲಸಿಕೆ ನೀಡಲಾಗಿದೆ ಎಂದು ಇಲಾಖೆಯ ವೈದ್ಯಾಧಿಕಾರಿ ಶಿವಕುಮಾರ ತಿಳಿಸಿದರು. 100 ಶೇಕಡಾ ಗುರಿ ಸಾಧಿಸಬೇಕು ಎಂದು ಸಚಿವರು ಸೂಚಿಸಿದರು.
ಶಿಕ್ಷಣ, ವಿದ್ಯುತ್ ಹಾಗೂ ಹಾಲು ಉತ್ಪಾದನೆ
2025–26ರಲ್ಲಿ ಗೊರಟೆ ಮತ್ತು ತೆಂಗಿನಗುಂಡಿ ಸರ್ಕಾರಿ ಪ್ರೌಢಶಾಲೆಗಳಿಗೆ ಮಂಜೂರು ನೀಡಲಾಗಿದೆ. ಕುಂಟವಾಣಿ, ಬೆಳಕೆ, ಮುಂಡಳ್ಳಿ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಪರಿವರ್ತಿಸಲು ಪ್ರಸ್ತಾವವಿದೆ ಎಂದು ಬಿಇಒ ವೆಂಕಟೇಶ್ ನಾಯ್ಕ ತಿಳಿಸಿದರು. 2026–27ರೊಳಗೆ ಹಳೆಯ ಶಾಲಾ ಕಟ್ಟಡಗಳನ್ನೆಲ್ಲ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಅಕ್ಷರ ದಾಸೋಹ, ಅಂಗನವಾಡಿ ಹಾಗೂ ಶೌಚಾಲಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಭಟ್ಕಳದಲ್ಲಿ 45,070 ಕುಟುಂಬಗಳ ಪೈಕಿ 39,400 ಕುಟುಂಬಗಳು ಗೃಹಜ್ಯೋತಿ ಯೋಜನೆ ಪ್ರಯೋಜನ ಪಡೆದಿವೆ. ತಿಂಗಳಿಗೆ ₹2.18 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಮಾಹಿತಿ ನೀಡಿದರು. ₹25 ಕೋಟಿ ವೆಚ್ಚದ 110 ಕೆ.ವಿ. ಘಟಕ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು, 73 ಟವರ್ಗಳಲ್ಲಿ 66 ಟವರ್ಗಳ ಕಾಮಗಾರಿ ಮುಗಿದಿದೆ ಎಂದರು.
ತಾಲೂಕಿನಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಹಾಲು ಸೊಸೈಟಿ ಹಾಗೂ ಹಾಲು ಸಂಸ್ಕರಣಾ ಘಟಕ ಸ್ಥಾಪನೆ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಕೃಷಿ ಹಾಗೂ ಕಾರ್ಮಿಕರ ಸಮಸ್ಯೆ
ಅಡಿಕೆ ಬೆಳೆ ಮೇಲೆ ಎಲೆಚುಕ್ಕಿ ರೋಗದ ಸಮಸ್ಯೆ ತೀವ್ರವಾಗಿರುವ ಬಗ್ಗೆ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜು ನಾಯ್ಕ ಮನವಿ ಮಾಡಿದರು. ರೈತರ ಜಾಗೃತಿ ಸಭೆ ನಡೆಸಿ ಅಗತ್ಯ ಔಷಧಿ ಪೂರೈಕೆ ಕುರಿತು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಕಾರ್ಮಿಕ ಕಾರ್ಡ್ ರದ್ದುಪಡಿಸುವ ಹೆಸರಿನಲ್ಲಿ ಮೋಸ ನಡೆಯುತ್ತಿರುವ ಬಗ್ಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿ, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಬಾಕ್ಸ್: ನಕಲಿ ಸಾಮಾಜಿಕ ಜಾಲತಾಣ ಖಾತೆ
“ಭಟ್ಕಳಕ್ಕೆ ಬದಲಾವಣೆ” ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಟಿಸಿರುವವರ ವಿರುದ್ಧ ತನಿಖೆ ನಡೆಯುತ್ತಿದೆ. ಈಗಾಗಲೇ ಒಂದು ಖಾತೆ ಪತ್ತೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಉಪವಿಭಾಗದ ಪ್ರಭಾರಿ ಸಹಾಯಕ ಆಯುಕ್ತ ಪ್ರವೀಣ ಕರಾಂಡೆ, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಶಿವಕ್ಕ ಎಂ., ಕಾರ್ಯನಿರ್ವಹಣಾಧಿಕಾರಿ ಸುನಿಲ್ ಎಂ. ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ