ಭಟ್ಕಳ: ದಕ್ಷ ಹಾಗೂ ಪಾರದರ್ಶಕ ಆಡಳಿತದ ಮೂಲಕ ಮನೆಮಾತಾಗಿರುವ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿ., ಶಿರಾಲಿ-ಭಟ್ಕಳ ಇದರ ಬೆಳ್ಳಿಹಬ್ಬ ಕಾರ್ಯಕ್ರಮ ಫೆ. 25ರಂದು ಚಿತ್ರಾಪುರ ರಸ್ತೆಯಲ್ಲಿರುವ ಸಂಘದ ನೂತನ ಕಟ್ಟಡದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಶೋಕ ಪೈ ತಿಳಿಸಿದರು.
ಶಿರಾಲಿಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರ ಜೂನ್ 14ರಂದು ಎಂಜಿಎಂ ದೇವಸ್ಥಾನ ರಸ್ತೆ ಪಕ್ಕದ ಪೈ ಕಾಂಪ್ಲೆಕ್ಸ್‌ನಲ್ಲಿ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಅಧೀಶ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಸಂಘ ಉದ್ಘಾಟನೆಯಾಯಿತು ಎಂದರು.
2025ರ ಮಾರ್ಚ್ 31ರಂತೆ ಸಂಘವು 8,653 ಸದಸ್ಯರನ್ನು ಹೊಂದಿದ್ದು, ₹143 ಕೋಟಿಗೂ ಅಧಿಕ ದುಡಿಯುವ ಬಂಡವಾಳದೊಂದಿಗೆ ಹೆಮ್ಮರವಾಗಿ ಬೆಳೆದಿದೆ. ಶಿರಾಲಿ, ಭಟ್ಕಳ, ಹೊನ್ನಾವರ ಹಾಗೂ ಕುಮಟಾ ಸೇರಿ ನಾಲ್ಕು ಶಾಖೆಗಳಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಶಾಖೆಗಳೂ ಲಾಭದಾಯಕವಾಗಿ ಮುಂದುವರಿದಿವೆ ಎಂದು ವಿವರಿಸಿದರು.
ಸಂಘ ಆರಂಭವಾದ ಎರಡು ವರ್ಷಗಳ ಬಳಿಕದಿಂದಲೇ ನಿರಂತರ 23 ವರ್ಷಗಳಿಂದ ಸದಸ್ಯರಿಗೆ ಶೇರುಗಳ ಮೇಲೆ ಲಾಭಾಂಶ ನೀಡಲಾಗುತ್ತಿದೆ. ಪ್ರಸ್ತುತ 12% ಡಿವಿಡೆಂಡ್ ವಿತರಿಸಲಾಗುತ್ತಿದೆ. ಲೆಕ್ಕಪರಿಶೋಧನೆಯಲ್ಲಿ ನಿರಂತರವಾಗಿ ‘ಆ’ ಶ್ರೇಣಿ ಕಾಯ್ದುಕೊಂಡಿರುವುದು ಸಂಘದ ಶಿಸ್ತುಬದ್ಧ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ರಾಜ್ಯ ಮಟ್ಟದ ಸಹಕಾರ ಸಮಾರಂಭಗಳಲ್ಲಿ ಮೂರು ಬಾರಿ ಉತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿದ್ದು, 2023-24ರಲ್ಲಿ ಕೆಡಿಸಿಸಿ ಬ್ಯಾಂಕ್ ಲಿ., ಶಿರಸಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಉತ್ತಮ ಸಹಕಾರ ಸಂಘ ಪ್ರಶಸ್ತಿ ದೊರೆತಿದೆ. 2025ರಲ್ಲಿ ರಾಜ್ಯ ಸರ್ಕಾರ ಸಂಘದ ಅಧ್ಯಕ್ಷರಿಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಘದಲ್ಲಿ 40 ಮಂದಿ ನೇರ ಹಾಗೂ 40 ಮಂದಿ ಪರೋಕ್ಷ ಉದ್ಯೋಗ ಪಡೆದಿದ್ದು, ಪ್ರತಿವರ್ಷ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಯಾವುದೇ ಆರ್ಥಿಕ ಸಂಸ್ಥೆ ಅಥವಾ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಿಂದ ಸಾಲ ಪಡೆಯದೆ, ಸದಸ್ಯರ ಠೇವಣಿ ಮತ್ತು ಸ್ವಂತ ಬಂಡವಾಳದ ಆಧಾರದ ಮೇಲೆ ಸಂಘ ಪ್ರಗತಿ ಸಾಧಿಸಿರುವುದು ವಿಶೇಷವೆಂದು ಹೇಳಿದರು.
ಚಿತ್ರಾಪುರ ರಸ್ತೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಫೆ. 25ರಂದು ಸಂಜೆ 4 ಗಂಟೆಗೆ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಉಮೇಶ ಕಾಮತ್ ಸೇರಿದಂತೆ ನರೇಂದ್ರ ನಾಯಕ್, ನಾಗೇಶ ಪೈ, ರವೀಂದ್ರ ಪ್ರಭು, ವಿದ್ಯಾ ಮಹಾಲೆ, ನಮಿತಾ ಕಾಮತ್, ವಾಮನ್ ಕಾಮತ್, ಅನಂತ ಕಾಮತ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶ್ಯಾನಭಾಗ ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ