
ಭಟ್ಕಳ: ಮುಟ್ಟಳ್ಳಿ ಮಂಡಲದ ಹಿಂದು ಸಮ್ಮೇಳನ ಸಮಿತಿ ವತಿಯಿಂದ ಭಾನುವಾರ ಮೂಡಭಟ್ಕಳದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಹಿಂದು ಸಮ್ಮೇಳನವು ಭಕ್ತಿಭಾವ ಮತ್ತು ಜಾಗೃತಿ ಸಂದೇಶಗಳ ಮಧ್ಯೆ ಅದ್ದೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು.

ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ಹಿಂದು ಜಾಗರಣಾ ವೇದಿಕೆಯ ಶಿವಾನಂದ ಬಡಿಗೇರ ಮಾತನಾಡಿ, “ಪಂಚ ಪರಿವರ್ತನೆ ಉದ್ದೇಶದೊಂದಿಗೆ ಧರ್ಮ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಟುಂಬ ವ್ಯವಸ್ಥೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಕುಟುಂಬ ಪ್ರಬೋಧನೆ ಅಗತ್ಯ. ಸ್ವದೇಶಿ ಜೀವನ ಶೈಲಿ ಅಳವಡಿಸಿಕೊಂಡು ಭಾರತೀಯ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು” ಎಂದು ಹೇಳಿದರು.
ಈ ಕಾರ್ಯಕ್ರಮ ಯಾವುದೇ ಜಾತಿ–ಮತ ವಿರೋಧಿಯಲ್ಲ; ಹಿಂದು ಧರ್ಮದ ಒಗ್ಗಟ್ಟು ಮೂಡಿಸುವ ವೇದಿಕೆ ಎಂದು ಅವರು ಸ್ಪಷ್ಟಪಡಿಸಿದರು. ಯುವಪೀಳಿಗೆ ಸಂಸ್ಕೃತಿಯಿಂದ ದೂರವಾಗದಂತೆ ಪಾಲಕರು ಎಚ್ಚರಿಕೆಯಿಂದಿರಬೇಕು. ಇತಿಹಾಸದ ಮಹನೀಯರ ಕಥೆಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಎಲ್ಲಾ ಧರ್ಮದವರು ಸೌಹಾರ್ದದಿಂದ ಬದುಕಬೇಕು. ರಾಮಾಯಣ–ಮಹಾಭಾರತದ ಮಹತ್ವವನ್ನು ವಿಶ್ವವೇ ಅರಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು, ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಸಮ್ಮೇಳನ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನೂರು ವರ್ಷಗಳ ಪರಂಪರೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವೆಯನ್ನು ಸ್ಮರಿಸಿದರು. 1970ರಲ್ಲಿ ಇದೇ ಸ್ಥಳದಲ್ಲಿ ಶಾಖೆ ಆರಂಭಗೊಂಡಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ಭಟ್ಕಳ ರೈಲ್ವೆ ನಿಲ್ದಾಣ ಸಮೀಪದ ಶ್ರೀ ನಾಗಮಾಸ್ತಿ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆ ಹೊರಟು, ಮುಟ್ಟಳ್ಳಿ ಗ್ರಾಮ ಪಂಚಾಯತ್ ಮಾರ್ಗವಾಗಿ ಮೂಡಭಟ್ಕಳ ಬೈಪಾಸ್ ಮೂಲಕ ಸಭಾ ಸ್ಥಳಕ್ಕೆ ತಲುಪಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು.
ಡಿವೈಎಸ್ಪಿ ಗಿರೀಶ್, ಸಿಪಿಐ ದಿವಾಕರ ಪಿ.ಎಂ., ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್, ಪಿಎಸ್ಐ ನವೀನ್ ನಾಯ್ಕ ಹಾಗೂ ತಿಮ್ಮಪ್ಪ ಎಸ್. ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷ್ಣ ನಾಯ್ಕ ಸ್ವಾಗತಿಸಿದರು. ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ವಿನೋದ ಶೆಟ್ಟಿ ವಂದಿಸಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ