March 1, 2026

ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತ ರಜತ ಮಹೋತ್ಸವ: ಸಹಕಾರ ಕ್ಷೇತ್ರದಲ್ಲಿ ವಿಶ್ವಾಸವೇ ಆಧಾರ

ಭಟ್ಕಳ: ಸಹಕಾರಿ ಕ್ಷೇತ್ರದಲ್ಲಿ ಠೇವಣಿದಾರರು, ಸಾಲಗಾರರು ಹಾಗೂ ನಿರ್ದೇಶಕ ಮಂಡಳಿಯ ಪರಸ್ಪರ ವಿಶ್ವಾಸವೇ ಸಂಘಗಳ ಬಲವಾಗಿದ್ದು, ಅದು ಉಳಿದರೆ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.


ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತ ರಜತ ಮಹೋತ್ಸವ ಹಾಗೂ ನೂತನ ಸ್ವಂತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಹಕಾರಿ ಸಂಘಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.


“ಹನುಮನ ಮತವೇ ಹರಿಯ ಮಾತು. ಹನುಮಂತನ ಸಾನ್ನಿಧ್ಯ ಇರುವ ಕಡೆ ಭಯಕ್ಕೆ ಅವಕಾಶವಿಲ್ಲ. ಸಂಘದ ಲಾಂಛನದಲ್ಲಿ ಹನುಮಂತನ ಪ್ರತೀಕ ಅಲಂಕರಿಸಿರುವುದು ಸಂಘದ ಏಳಿಗೆಯ ಸಂಕೇತ,” ಎಂದು ಹೇಳಿದರು. ಗ್ರಾಹಕರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸಬೇಕೆಂದು ಸಲಹೆ ನೀಡಿದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಪಾರದರ್ಶಕ ಆಡಳಿತದಿಂದಲೇ ಸಹಕಾರಿ ಸಂಘಗಳು ಜನರ ವಿಶ್ವಾಸ ಗಳಿಸಬಹುದು ಎಂದರು. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಡವರು ಹಾಗೂ ಸಣ್ಣ ವ್ಯಾಪಾರಿಗಳಿಗೆ ನೆರವಾಗುತ್ತಿವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಸಂಘ ಜನಮನ ಗೆದ್ದಿದೆ. ಸಿಬ್ಬಂದಿ ಹಾಗೂ ನಿರ್ದೇಶಕ ಮಂಡಳಿಯ ಸಮನ್ವಯ ಕಾರ್ಯ ಸಂಘದ ಬೆಳವಣಿಗೆಗೆ ಕಾರಣವಾಗಿದೆ ಎಂದರು.


ಮಾಜಿ ಶಾಸಕ ಸುನೀಲ ನಾಯ್ಕ ಉತ್ತಮ ಸೇವೆಯಿಂದ ಸಂಘ ಹೆಸರುವಾಸಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಅಶೋಕ ಪೈ ಅಧ್ಯಕ್ಷತೆ ವಹಿಸಿ, ಸಂಘದ ಬೆಳವಣಿಗೆಯ ಹಾದಿಯನ್ನು ವಿವರಿಸಿದರು. “ಸ್ವಂತ ಕಟ್ಟಡ ನಿರ್ಮಾಣವು ಶೇರುದಾರರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ದೀರ್ಘಕಾಲದ ಕನಸಾಗಿತ್ತು,” ಎಂದರು.ಉಪಾಧ್ಯಕ್ಷ ಉಮೇಶ ಕಾಮತ್ ಸೇರಿದಂತೆ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನರೇಂದ್ರ ನಾಯಕ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಪ್ರಭು ವಂದಿಸಿದರು. ಪ್ರಸನ್ನ ಪ್ರಭು ಕಾರ್ಯಕ್ರಮ ನಿರೂಪಿಸಿದರು.

About The Author

error: Content is protected !!