ಭಟ್ಕಳ:ಭಟ್ಕಳ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕವೂ ಹತ್ತು ತಿಂಗಳಿನಿಂದ ಬಿಲ್ ಪಾವತಿ ಆಗದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ 3ನೇ ದರ್ಜೆಯ ಸಿವಿಲ್ ಗುತ್ತಿಗೆದಾರ ಕಿರಣ ನಾರಾಯಣ ಶಿರೂರು ಆರೋಪಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಗುತ್ತಿಗೆದಾರರಾಗಿರುವ ಅವರು, ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ಸುಮಾರು ರೂ. 7 ಲಕ್ಷದ ಕಾಮಗಾರಿ ಪೂರ್ಣಗೊಳಿಸಿದ್ದಾಗಿ ತಿಳಿಸಿದ್ದಾರೆ. ಕಾಮಗಾರಿ ನೆರವೇರಿಸಲು ಬ್ಯಾಂಕ್ ಹಾಗೂ ಖಾಸಗಿ ಮೂಲಗಳಿಂದ ಸಾಲ ಪಡೆದಿದ್ದಾಗಿ ಹೇಳಿದ ಅವರು, ಬಿಲ್ ಬಾಕಿ ಉಳಿದಿರುವುದರಿಂದ ಸಾಲಗಾರರಿಂದ ಮರುಪಾವತಿ ಒತ್ತಡ ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ಭಟ್ಕಳ ತಹಶೀಲ್ದಾರ್ ಕಚೇರಿ ಹಾಗೂ ಸಂಬಂಧಿತ ಮುಖ್ಯಾಧಿಕಾರಿಗಳ ಗಮನಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದ್ದಾರೆ. 2024-25ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನ ಭಾಗಶಃ ಮಾತ್ರ ಬಿಡುಗಡೆಯಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಇನ್ನೊಂದೆಡೆ, ಹೊನ್ನಾವರ ಪುರಸಭೆಯಲ್ಲಿ 2025-26ನೇ ಸಾಲಿನ 15ನೇ ಹಣಕಾಸು ಅನುದಾನ ಇನ್ನೂ ಬಿಡುಗಡೆಯಾಗದಿದ್ದರೂ ಟೆಂಡರ್ ಕರೆದು ಕಾಮಗಾರಿ ಮಾಡಲು ಒತ್ತಡ ಹೇರುತ್ತಿರುವುದು ಗುತ್ತಿಗೆದಾರರ ಮೇಲೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ಕಿರಣ ಶಿರೂರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಭಟ್ಕಳ ಪುರಸಭೆ ಕಚೇರಿ ಎದುರು ಶಾಂತ ರೀತಿಯಲ್ಲಿ ಧರಣಿ ನಡೆಸಿ, ಬಿಲ್ ಪಾವತಿಗೆ ಹತ್ತು ದಿನಗಳ ಗಡುವು ನೀಡಿದ್ದಾರೆ.
“ಕಾಮಗಾರಿ ಮುಗಿದು ಹತ್ತು ತಿಂಗಳಾದರೂ ಬಿಲ್ ಪಾವತಿ ಆಗಿಲ್ಲ. ಆದರೂ 2025-26ನೇ ಸಾಲಿನ 15ನೇ ಹಣಕಾಸಿನ ಅಡಿಯಲ್ಲಿ ಮತ್ತೆ ಟೆಂಡರ್ ಕರೆದು ಕಾಮಗಾರಿ ಆದೇಶ ನೀಡಿದ್ದಾರೆ. ಹಣವಿಲ್ಲದೆ ಮುಂಗಡವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ಹತ್ತು ದಿನಗಳೊಳಗೆ ಬಿಲ್ ಪಾವತಿಸದಿದ್ದರೆ ಇದೇ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ,” ಎಂದು ಸಿವಿಲ್ ಗುತ್ತಿಗೆದಾರ ಕಿರಣ ನಾರಾಯಣ ಶಿರೂರು ಎಚ್ಚರಿಸಿದ್ದಾರೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ