March 1, 2026

ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ

ಭಟ್ಕಳ: ಪಟ್ಟಣದ ಹೃದಯಭಾಗದಲ್ಲಿದ್ದ ‘ಸಂಶುದ್ದೀನ್ ಸರ್ಕಲ್’ ಪ್ಯೂರ್ ಗೋಲ್ಡ್ ಗಡಿಯಾರದ ಗೋಪುರ ಇತಿಹಾಸದ ಪುಟಗಳಿಗೆ ಸೇರಿತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಸುಮಾರು 24 ವರ್ಷಗಳಿಂದ ಭಟ್ಕಳದ ಗುರುತಾಗಿದ್ದ ಈ ಗೋಪುರವನ್ನು ಜೆಸಿಬಿ ಯಂತ್ರದ ಸಹಾಯದಿಂದ ನೆಲಸಮಗೊಳಿಸಲಾಯಿತು.


2002ರಲ್ಲಿ ಪ್ಯೂರ್ ಗೋಲ್ಡ್ ಮಳಿಗೆ ಮಾಲೀಕ ಶಬೀಬ್ ಕೋಲಾ ಅವರಿಂದ ಸುಮಾರು ₹8-10 ಲಕ್ಷ ವೆಚ್ಚದಲ್ಲಿ ಈ ಗೋಪುರ ನಿರ್ಮಾಣಗೊಂಡಿತ್ತು. ದುಬೈಯಲ್ಲಿ ಕಂಡ ಗಡಿಯಾರದ ಗೋಪುರದ ವಿನ್ಯಾಸದಿಂದ ಪ್ರೇರಿತವಾಗಿ ನಿರ್ಮಿಸಲಾದ ಈ ರಚನೆ ನಾಲ್ಕು ದಿಕ್ಕುಗಳಲ್ಲಿ ಗಡಿಯಾರ, ಮಧ್ಯದಲ್ಲಿ ಚಿನ್ನದ ಬಣ್ಣದ ಬಳೆ ಮಾದರಿ ಹಾಗೂ ತುದಿಯಲ್ಲಿ ಸುಮಾರು 2 ಟನ್ ತೂಕದ ಗ್ರಾನೈಟ್ ಬಾಲ್ ಹೊಂದಿ ಆಕರ್ಷಕವಾಗಿ ಕಂಗೊಳಿಸುತ್ತಿತ್ತು.
ಒಂದು ಕಾಲದಲ್ಲಿ “ಭಟ್ಕಳ ಎಂದರೆ ಈ ಗೋಪುರವೇ” ಎನ್ನುವಷ್ಟು ಪ್ರಸಿದ್ಧಿ ಪಡೆದಿದ್ದ ಇದು, ಪ್ರವಾಸಿಗರಿಗೂ ಸೆಲ್ಫಿ ಪಾಯಿಂಟ್ ಆಗಿತ್ತು. ವಿವಿಧ ರಾಜಕೀಯ ಪ್ರತಿಭಟನೆಗಳು, ಜಾಗೃತಿ ಜಾಥಾಗಳು, ವಿಜಯೋತ್ಸವಗಳು ಸೇರಿದಂತೆ ಸಾವಿರಾರು ಕಾರ್ಯಕ್ರಮಗಳಿಗೆ ಈ ವೃತ್ತ ಸಾಕ್ಷಿಯಾಗಿತ್ತು.
ಜೆಸಿಬಿ ಕೈಚಾಚುತ್ತಿದ್ದಂತೆಯೇ ಜನರ ನೆರೆದಾಟ
ಗೋಪುರ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ವೃತ್ತದತ್ತ ಧಾವಿಸಿದರು. ಹಲವರು ಮೊಬೈಲ್ ಫೋನ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ನೆನಪಾಗಿ ಉಳಿಸಿಕೊಂಡರು. ಕಾರ್ಯಾಚರಣೆಯ ವೇಳೆ ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ನಿರ್ವಹಣೆ ಕೊರತೆಯಿಂದ ಕಳೆದುಹೋದ ಹೊಳಪು ಆರಂಭದಲ್ಲಿ ಗೋಪುರದ ಗಡಿಯಾರ ಕಾರ್ಯನಿರ್ವಹಿಸುತ್ತಿದ್ದರೂ, ಬಳಿಕ ದುರಸ್ತಿ ಕೊರತೆಯಿಂದ ನಿಂತುಹೋಯಿತು. ಸಮರ್ಪಕ ನಿರ್ವಹಣೆ ಇಲ್ಲದೆ ಗೋಪುರದ ಹೊಳಪು ಕುಂದಿತ್ತು. ಆದರೂ ಪಟ್ಟಣದ ಹೆಗ್ಗುರುತಾಗಿ ಉಳಿದಿದ್ದ ಈ ರಚನೆ, ಇದೀಗ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಜಾಗ ಬಿಡಬೇಕಾಯಿತು.
ಈ ವೃತ್ತದಲ್ಲಿ ಹಬ್ಬಗಳು, ವಿವಿಧ ಕಾರ್ಯಕ್ರಮಗಳು ಹಾಗೂ ಬಂಟಿಂಗ್ಸ್ ವಿಚಾರದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು ಪೊಲೀಸರಿಗೆ ತಲೆನೋವಾಗಿತ್ತು. ಚತುಷ್ಪಥ ಹೆದ್ದಾರಿಯಾಗಿ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೃತ್ತ ತೆರವುಗೊಂಡಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.


ವೃತ್ತದ ನೆಲಸಮಗೊಳಿಸುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ದಿವಾಕರ ಪಿ.ಎಂ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಡುವೆ ಕಾರ್ಯಾಚರಣೆ ಪೂರ್ಣಗೊಂಡಿತು.24 ವರ್ಷದ ನೆನಪುಗಳಿಗೆ ಸಾಕ್ಷಿಯಾದ ಗೋಪುರ ಇದೀಗ ಇಲ್ಲ… ಭಟ್ಕಳ ವೃತ್ತದಲ್ಲಿ ಉಳಿದಿರುವುದು ನೆನಪು ಮಾತ್ರ

About The Author

error: Content is protected !!