ಹೊನ್ನಾವರ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ಮಹಿಳೆಯರು ಸರಿಯಾದ ಅರಿವು ಬೆಳೆಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಚೇತನ್ ಕುಮಾರ್ ಅವರು ಕರೆ ನೀಡಿದರು.




ಗ್ರಾಮ ಪಂಚಾಯತ್ ಉಪ್ಪೋಣಿ ಹಾಗೂ ಓಂಕಾರ ಸಂಜೀವಿನಿ ಒಕ್ಕೂಟ ಉಪ್ಪೋಣಿ ಇವರ ಸಹಯೋಗದಲ್ಲಿ ಪಂಚಾಯತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ಸರ್ಕಾರದಿಂದ ಮಹಿಳೆಯರಿಗಾಗಿ ಇರುವ ವಿವಿಧ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಶಿಕ್ಷಕಿ ಸಾಧನಾ ಬರ್ಗಿ ಮಾತನಾಡಿ, “ಇಂದಿನ ಮಹಿಳೆ ಕೇವಲ ಮನೆಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಅಂಗಳದಿಂದ ಹಿಡಿದು ಮಂಗಳದವರೆಗೆ ಅವಳ ಕಾರ್ಯವ್ಯಾಪ್ತಿ ವಿಸ್ತರಿಸಿದೆ” ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸ್ಮರಿಸಿ ಶ್ಲಾಘಿಸಿದರು.
ಮಹಿಳಾ ಸಾಂತ್ವನ ಕೇಂದ್ರದ ರೂಪಾ ರವರು
ಕೌಟುಂಬಿಕ ದೌರ್ಜನ್ಯದ ಕುರಿತು ಮಾತನಾಡಿ, ಮಹಿಳೆಯರು ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಧೈರ್ಯ ಬೆಳೆಸಿಕೊಳ್ಳಬೇಕು ಹಾಗೂ ಕಾನೂನು ಅರಿವು ಹೊಂದಿರಬೇಕು ಎಂದರು.




ಗಣೇಶ ನಾಯ್ಕ ರವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತಾಗಿ ಈ ಸಂದರ್ಭದಲ್ಲಿ ಮಾತನಾಡಿದರು..
ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಮದ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರ ಹಸ್ತದಿಂದ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ‘ಉತ್ತಮ ಒಕ್ಕೂಟ’ಕ್ಕೆ ವಿಶೇಷ ಸನ್ಮಾನ ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಕೆ.ಎಚ್. ಗೌಡ, ತಾರಾ ಕೆ. ನಾಯ್ಕ, ಗ್ರಂಥಾಲಯ ಮೇಲ್ವಿಚಾರಕಿ ಅಮೃತ, ಆಶಾ ಕಾರ್ಯಕರ್ತೆ ಸಾವಿತ್ರಿ ಭಟ್, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿಗಳಾದ ಸಂಧ್ಯಾ ಮತ್ತು ರಾಧಾ ಹಾಗೂ ಸಾಂತ್ವನ ಕೇಂದ್ರದ ದೀಪಾ ಉಪಸ್ಥಿತರಿದ್ದರು.



ಸಂಜೀವಿನಿ ಒಕ್ಕೂಟದ ವನಿತಾ ಗೌಡ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸ್ವಾಗತ ಕೋರಿದರು ಮತ್ತು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು…

More Stories
ಶರಾವತಿ ಆರತಿ ಉತ್ಸವ ಸಮಿತಿಯವರು ಹೊನ್ನಾವರ ಬಂದರು ಪ್ರದೇಶದಲ್ಲಿ ಆಯೋಜಿಸಿದ ಶರಾವತಿ ಆರತಿ ಕಾರ್ಯಕ್ರಮ
ಅಪ್ಸರಕೊಂಡ ಕಡಲತೀರದಲ್ಲಿ ಮೃತ ಕಡಲಾಮೆಯ ದೇಹ ಪತ್ತೆ
ನೈಜ ಒತ್ತುವರಿಗಳನ್ನು ಸಕ್ರಮ ಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ತೋರಬೇಕು ಚಂದ್ರಕಾಂತ ಕೊಚರೇಕರ ಆಗ್ರಹ