March 28, 2026

ಸುಸಂಪನ್ನಗೊಂಡ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ


ಭಟ್ಕಳ: ಪಟ್ಟಣದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ರಾಮನವಮಿ ಪ್ರಯುಕ್ತ ಶುಕ್ರವಾರ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಅತ್ಯಂತ ವೈಭವದಿಂದ ಜರುಗಿತು.


ಯುಗಾದಿಯ ಮರುದಿನದಿಂದಲೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದವು. ಗೋಕರ್ಣದ ತಾಂತ್ರಿಕರಾದ ವೇದಮೂರ್ತಿ ಶ್ರೀನಿವಾಸ ಅಡಿಗ ಅವರ ತಾಂತ್ರಿಕತ್ವದಲ್ಲಿ ಹಾಗೂ ದೇವಸ್ಥಾನದ ಅರ್ಚಕ ಪ್ರಮೋದ ಶಂಕರ ಭಟ್ಟ ಬಚ್ಚೋಡಿ ಅವರ ಅರ್ಚಕತ್ವದಲ್ಲಿ ಎಲ್ಲಾ ಪೂಜಾ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನೆರವೇರಿದವು.


ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ರಥಕಾಣಿಕೆ ಸಲ್ಲಿಸಲು ದೀರ್ಘ ಸಾಲಿನಲ್ಲಿ ನಿಂತು ಫಲಪುಷ್ಪಗಳನ್ನು ಅರ್ಪಿಸಿದರು. ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳು ಹಾಗೂ ಹೊರ ಊರುಗಳಿಂದ ಆಗಮಿಸಿದ ಭಕ್ತರು ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಿ ಜಾತ್ರೆಯ ಧಾರ್ಮಿಕ ಉತ್ಸಾಹವನ್ನು ಹೆಚ್ಚಿಸಿದರು.


ಸಂಜೆ 5:30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಭಕ್ತರ ಘೋಷಣೆಗಳ ನಡುವೆ ರಾಮಭಕ್ತ ಹನುಮಂತನ ಬ್ರಹ್ಮರಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೂವಿನಪೇಟೆ, ಮುಖ್ಯ ರಸ್ತೆ ಹಾಗೂ ರಥಬೀದಿಯ ಮೂಲಕ ಸಾಗಿದ ರಥವನ್ನು ನೋಡಲು ಸಾವಿರಾರು ಜನರು ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಭಕ್ತಿಭಾವದಿಂದ ನಮಸ್ಕರಿಸಿದರು.


ಸಂಪ್ರದಾಯದಂತೆ ಜರ್ಕಿಯ ಅನ್ಸಾರಿ, ಶಾಬಂದ್ರಿ ಮನೆ ಹಾಗೂ ಜೈನ ಮನೆತನಗಳಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಹಿಂದು-ಮುಸ್ಲಿಂ-ಜೈನ ಸಮುದಾಯಗಳ ಸೌಹಾರ್ದ ಸಹಭಾಗಿತ್ವ ಮತ್ತೊಮ್ಮೆ ಗಮನ ಸೆಳೆಯಿತು. ಈ ಜಾತ್ರೆಯು ಭಟ್ಕಳದ ಸಾಂಪ್ರದಾಯಿಕ ಸೌಹಾರ್ದತೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ.
ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಈ ಮಹೋತ್ಸವದಲ್ಲಿ ಭಾಗವಹಿಸಿದ್ದು, ಭಾರಿ ಸೆಕೆಯ ನಡುವೆಯೂ ಜನಸಂದಣಿ ಉತ್ಸವದ ಕಳೆ ಹೆಚ್ಚಿಸಿತು.


ಜಾತ್ರೆಯ ವಿಶೇಷ ಆಕರ್ಷಣೆಗಳಾಗಿ ತಟ್ಟಿರಾಯ, ಹುಲಿವೇಷ, ಚಂಡೆ ವಾದ್ಯಗಳು ಜನರನ್ನು ರಂಜಿಸಿತು. ರಥದ ಹಿಂಭಾಗದಲ್ಲಿ ಯುವಕರಿಂದ ನಡೆದ ಡಿ.ಜೆ. ನೃತ್ಯವೂ ಜನಮನ ಸೆಳೆಯಿತು.
ಸಚಿವ ಮಂಕಾಳ ವೈದ್ಯ ಹಾಗೂ ಪುತ್ರಿ ಬೀನಾ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ಶ್ರೀನಿವಾಸ ನಾಯ್ಕ, ಶಿವಾನಿ ಶಾಂತಾರಾಮ ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.


ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಿರೀಶ ಬಿ. ನೇತೃತ್ವದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತೆ ಒದಗಿಸಿತು. ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದ ನಿಯೋಜನೆಯೊಂದಿಗೆ ರಥೋತ್ಸವವು ಶಾಂತಿಯುತವಾಗಿ ನೆರವೇರಿತು.

About The Author

error: Content is protected !!