ಭಟ್ಕಳ: ಸಣ್ಣ ಮಟ್ಟಿನ ಹಾರ್ನ್ ವಿಚಾರವಾಗಿ ಆರಂಭವಾದ ವಾಗ್ವಾದವು ಗಂಭೀರ ಚಾಕು ಹಲ್ಲೆಗೆ ತಿರುಗಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸಾಯಂಕಾಲ ಜಾಲಿ ಬೀಚ್ ರಸ್ತೆಯಲ್ಲಿ ಆರಂಭವಾದ ಮಾತಿನ ಚಕಮಕಿ, ರಾತ್ರಿ ವೇಳೆಗೆ ಜಾಲಿ ದೇವಿನಗರ ಕ್ರಾಸ್ ಬಳಿ ಹಿಂಸಾತ್ಮಕ ತಿರುವು ಪಡೆದಿದೆ. ಜಾಲಿ ರಸ್ತೆ ನಿವಾಸಿ ಸಯ್ಯದ್ ಮಹ್ಮದ್ ಫಾಹೀಸ್ ನೀಡಿದ ದೂರಿನ ಪ್ರಕಾರ, ಸಂಜೆ ಸುಮಾರು 6.30ರ ಸುಮಾರಿಗೆ ಮನೆಗೆ ಬರುತ್ತಿದ್ದ ವೇಳೆ ಬೊಲೆರೋ ವಾಹನದ ಹಾರ್ನ್ ವಿಚಾರವಾಗಿ ವಾಗ್ವಾದ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿತರಾದ ಮಹ್ಮದ್ ತಾಹೀರ್, ಕೈಫ್ ಕುಟ್ಟಿ, ಯಾಸೀನ್ ಪಾಷಾ, ಮಹ್ಮದ್ ಮೌಲಾ @ ಮುಸ್ತಾಕ್, ಮಹ್ಮದ್ ಖಾಸೀಂ ಸೇರಿದಂತೆ ಇತರರು ಗುಂಪಾಗಿ ರಾತ್ರಿ ಬೊಲೆರೋ, ಮಾರುತಿ ಸ್ವಿಫ್ಟ್ ಕಾರು ಹಾಗೂ ಬೈಕ್‌ನಲ್ಲಿ ಬಂದು ಫಿರ್ಯಾದಿದಾರರ ಸ್ಕೂಟರ್‌ನ್ನು ಅಡ್ಡಗಟ್ಟಿ ಗಲಾಟೆ ನಡೆಸಿದ್ದಾರೆ.
ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಬಳಿಕ ಚಾಕುಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ತೌಸೀಪ್ ಖತೀಬ್ ಅವರ ಹೊಟ್ಟೆಗೆ ಹಾಗೂ ಮಹ್ಮದ್ ಜುಪಾಪ್ ಆರ್ಮರ್ ಅವರ ಕುತ್ತಿಗೆ ಭಾಗಕ್ಕೆ ಇರಿಯ ಲಾಗಿದೆ. ಮಹ್ಮದ್ ವಸೀಂ ಅವರ ಕೈಗೂ ಗಾಯವಾಗಿದ್ದು, ಮಧ್ಯಸ್ಥಿಕೆ ಮಾಡಲು ಬಂದ ಇನ್ನೊಬ್ಬರ ಮೇಲೂ ಹಲ್ಲೆ ನಡೆದಿದೆ.
ಘಟನೆಯ ಗೊಂದಲದ ನಡುವೆ ಗಾಯಾಳುವಿನ ಸುಮಾರು ₹20 ಲಕ್ಷ ಮೌಲ್ಯದ ವಾಚ್ ಹಾಗೂ ₹40,000 ನಗದು ಕಳೆದುಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಗಾಯಾಳುಗಳನ್ನು ತಕ್ಷಣ ಸರ್ಕಾರಿ ಆಸ್ಪತ್ರೆ ಹಾಗೂ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿದ ತಕ್ಷಣ ನೂರಾರು ಜನರು ಆಸ್ಪತ್ರೆಗೆ ಧಾವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಸಾವಿರಕ್ಕೂ ಹೆಚ್ಚು ಜನರು ಲೈಫ್ ಕೇರ್ ಆಸ್ಪತ್ರೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಗಿರೀಶ್ ಹಾಗೂ ಸಿಪಿಐ ದಿವಾಕರ ಪಿ.ಎಂ. ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳು ಬಂಧಿಸಿದ್ದಾರೆ.

More Stories
ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಭಟ್ಕಳ ಪಿ.ಎಸ್.ಐ. ನವೀನ್ ನಾಯ್ಕ ಆಯ್ಕೆ
ಸುಸಂಪನ್ನಗೊಂಡ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ
ಸಾರದಹೊಳೆದಲ್ಲಿ ರಾಮನವಮಿ ಹಾಗೂ ವರ್ಧಂತೋತ್ಸವಕ್ಕೆ ಭವ್ಯ ಸಿದ್ಧತೆ