March 28, 2026

ಶರಾವತಿ ಆರತಿ ಉತ್ಸವ ಸಮಿತಿಯವರು ಹೊನ್ನಾವರ ಬಂದರು ಪ್ರದೇಶದಲ್ಲಿ ಆಯೋಜಿಸಿದ ಶರಾವತಿ ಆರತಿ ಕಾರ್ಯಕ್ರಮ

ಹೊನ್ನಾವರ : ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಾಪುರ ಮನ್ನೆಲೆ ಮಾವಿನಮಠದ ಶ್ರೀ ಮಾಧವಾನಂದ ಭಾರತೀ ಶ್ರೀಗಳು ಶರಾವತಿ ಕಳಸಕ್ಕೆ ಆರತಿ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಆಶೀರ್ವಚನದಲ್ಲಿ ನದಿಗೆ ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನವಿದ್ದು, ಶಕ್ತಿಯಾಗಿ ಆರಾಧಿಸುವ ಸಂಪದ್ರಾಯ ಹಿಂದೂ ಪರಂಪರೆಯಲ್ಲಿ ಬಂದಿದೆ. ಶರಾವತಿ ನದಿಯು ಅಮೃತ ಸಮಾನವಾದ ನೀರನ್ನು ಲಕ್ಷಾಂತರ ಜನರಿಗೆ ನೀಡುತ್ತಿದೆ. ನದಿ ಹೋಗಿ ಸಮುದ್ರ ಸೇರುವುದನ್ನು ತಡೆದು ನಿಲ್ಲಿಸುವ ಅನೇಕ ವಿನಾಶಕಾರಿ ಯೋಜನೆ ಜಾರಿ ಮಾಡಲು ಮುಂದಾಗುತ್ತಿರುವುದನ್ನು ತಡೆಯಬೇಕು. ನದಿ ಪರೋಪಕಾರಕ್ಕೆ ಇದ್ದು, ನಾವು ಅದನ್ನು ಪ್ರತಿನಿತ್ಯ ಮಲಿನ ಮಾಡುತ್ತಿದ್ದೇವೆ. ಪ್ರಕೃತಿ ನಾಶ ಮಾಡಿ ಹಲವು ಯೋಜನೆಗಳು ಜಾರಿಗೆ ತರುವುದು ಸರ್ಕಾರದ ಅಭಿವೃದ್ದಿಯಾ? ಎನ್ನುವ ಪ್ರಶ್ನೆಯನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಶರಾವತಿ ನದಿಗೆ ಪಂಪ್ಡ ಸ್ಟೋರೆಜ್, ಅಘನಾಶಿನಿ ನದಿ ಇನ್ನೊಂದು ನದಿಗೆ ಸೇರಿಸುವಂತಹ ಹಲವು ಯೋಜನೆಗಳಿಂದ ಜಿಲ್ಲೆಯ ಜನರಿಗೆ ಭವಿಷ್ಯದಲ್ಲಿ ಕಂಟಕವಾಗಲಿದೆ. ನಾವು ಹುಟ್ಟಿದ ಊರನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಪಂಪ್ಡ್ ಸ್ಟೋರೆಜ್ ಯೋಜನೆ ತಾತ್ಕಲಿಕವಾಗಿ ತಡೆ ಸಿಕ್ಕಿದ್ದರೂ, ನಾವು ಶಾಶ್ವತವಾಗಿ ನಿಲ್ಲುವರೆಗೂ ಹೋರಾಟ ಮಾಡಬೇಕು. ನಮ್ಮ ಹೋರಾಟ ಆಡಳಿತ ನಡೆಸುವ ಸರ್ಕಾರಕ್ಕೆ ಬಿಸಿ ಮುಟ್ಟಿದಾಗ ಮಾತ್ರ ಈ ಯೋಜನೆ ನಿಲ್ಲಲಿದೆ. ಉತ್ತರಕನ್ನಡದವರು ಶಾಂತಿಪ್ರೀಯರು, ಶಾಂತವಾಗಿದ್ದವರನ್ನು ಕೆಣಕಿದರೆ ಹೇಗಿರಲಿದೆ ಎನ್ನುವುದನ್ನು ಮುಂದಿನ ದಿನದಲ್ಲಿ ನಾವೆಲ್ಲರೂ ತೋರಿಸುವ ಕಾರ್ಯವಾಗಬೇಕು. ಮೂಲಭೂತವಾಗಿ ಜಿಲ್ಲೆಗೆ ಅಗತ್ಯ ಇರುವ ಆಸ್ಪತ್ರೆ, ವಿಶ್ವವಿದ್ಯಾಲಯ ಅಗತ್ಯವಿದೆ. ನಮಗೆ ಅಗತ್ಯವಿಲ್ಲದ ಜನವಿರೋಧಿ ಯೋಜನೆಗಳ ವಿರುದ್ದ ಎಲ್ಲರೂ ಸಂಘಟಿತರಾಗಿ ಹೋರಾಡೋಣ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ ಶರಾವತಿ ನದಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ನಡೆದ ಹೋರಾಟದ ಧ್ವನಿಯನ್ನು ವಿಧಾನಸಭೆಯ ಅಧಿವೇಶದಲ್ಲಿ ಎರಡು ಬಾರಿ ಪ್ರಸ್ತಾಪಿಸಿ ಸರ್ಕಾರಕ್ಕೆ ಮುಟ್ಟಿಸುವ ಕಾರ್ಯ ಮಾಡಿದರೂ, ನಮ್ಮ ಜಿಲ್ಲೆಯ ಇತರೆ ಶಾಸಕರು ಅಧಿವೇಶನದಲ್ಲಿ ಧ್ವನಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನದಲ್ಲಿ ಈ ಯೋಜನೆಯ ವಿರುದ್ದ ಹೋರಾಟ ತೀವ್ರಗೊಳಿಸೋಣ ಎಂದು ಕರೆ ನೀಡಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕುಮಟಾ ಹೆಲ್ತಕೇರ್ ಸೆಂಟರ್ ಖ್ಯಾತ ವೈದ್ಯ ಡಾ. ಜಿ.ಜಿ.ಹೆಗಡೆ ಮಾತನಾಡಿ ಹಿಂದು ಧರ್ಮದಲ್ಲಿ ಪ್ರಕೃತಿ ಮಾತೆಯನ್ನು ಪೂಜಿಸುತ್ತೇವೆ. ನದಿಗಳಿಗೆ ತಾಯಿಯ ಸ್ಥಾನವನ್ನು ನೀಡುವ ಮೂಲಕ ಗೌರವಿಸುತ್ತಾ ಬಂದಿದ್ದೇವೆ. ಶರಾವತಿ ನದಿಯನ್ನು ಕಳೆದ ಹಲವಾರು ವರ್ಷದಿಂದ ನಿರಂತರ ದೌರ್ಜನ್ಯ ಮಾಡುತ್ತಾ ಬಂದಿದ್ದೇವೆ. ಮೀನುಗಾರರು, ಕೃಷಿಗಳಿಗೆ, ಹಲವು ಜೀವವೈವಿಧ್ಯಕ್ಕೆ ಶರಾವತಿ ನದಿ ಆಸರೆಯಾಗಿದೆ. ಕೇವಲ ಆರತಿಯೊಂದು ಮಾಡದೆ ನಾವೆಲ್ಲರೂ ಜವಬ್ದಾರಿಯ ಜೊತೆ ಸಂಕಲ್ಪ ಮಾಡಬೇಕು. ಸರ್ಕಾರದ ಕಾಗದಪತ್ರ ಯೋಜನೆಗಳು ಅಭಿವೃದ್ದಿ ಹೆಸರಿನಲ್ಲಿ ನಡೆಯುತ್ತಾ ಇರಲಿದೆ. ನಾವೆಲ್ಲರೂ ಇಂತಹ ಜನವಿರೋಧಿ ಯೋಜನೆಯ ವಿರುದ್ದ ಹೋರಾಟಕ್ಕೆ ಅಣಿಯಾಗೋಣ. “ನೇಚರ್ ಇದ್ದರೆ ಮಾತ್ರ ಪ್ಯೂಚರ್ ಇರಲಿದೆ”. ಅದಿಲ್ಲದೇ ಹೊದಲ್ಲಿ ನಮ್ಮ “ಜೀವನ ಪಂಚರ್ ” ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಸಮಿತಿಯ ಕಾರ್ಯಧ್ಯಕ್ಷ ಜಿ.ಜಿ.ಶಂಕರ ಮಾಜಿ ಪ.ಪಂ.ಸದಸ್ಯ ಶಿವರಾಜ ಮೇಸ್ತ, ಲೋಕೇಶ ಮೇಸ್ತ, ಲಕ್ಷ್ಮಣ ಮೇಸ್ತ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ತಾರಾ ಭಟ್ ಸಂಗಡಿಗರ ವಾಗ್ದೇವಿ ಭಜನಾ ಮಂಡಳಿಯ ತಂಡದಿAದ ಭಜನಾ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮದ ನಂತರ ಐದು ಸಭಾ ಮಂಟಪದಲ್ಲಿ ಆರತಿ ಬೆಳಗಿಸುವ ಮೂಲಕ ಸಮಿತಿಯ ವತಿಯಿಂದ ಗೌರವ ಸಲ್ಲಿಸಲಾಯಿತು. ನಂತರ ಸಾಋವಜನಿಕರು ನೂರಾರು ಹಣತೆಗಳನ್ನು ಹಚ್ಚಿ ನದಿಯಲ್ಲಿ ತೇಲಿ ಬಿಡಲಾಯಿತು. ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ಸ್ವಾಗತಿಸಿದರು. ಕೇಶವ ನಾಯ್ಕ ಬಳ್ಕೂರ್ ವಂದಿಸಿದರು. ವಿಶ್ವನಾಥ ನಾಯಕ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!