ಹೊನ್ನಾವರ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಪಿ.ಇ ಸೊಸೈಟಿಯ ಎಸ್.ಡಿ.ಎಂ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಎಂ.ಪಿ.ಇ.ಎಸ್ ಸೆಂಟ್ರಲ್ ಸ್ಕೂಲ್ ಹಾಗೂ ಡಾ. ಎಂ.ಪಿ. ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಸಹಯೋಗದೊಂದಿಗೆ ಎಸ್.ಡಿ.ಎಂ ಸಂಭ್ರಮ-2026 ಹಳೆಯ ವಿದ್ಯಾರ್ಥಿಗಳ ಬೃಹತ್ ಸಮಾವೇಶವನ್ನು ಇದೇ ಏಪ್ರಿಲ್ 4 ಮತ್ತು 5 ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಂ.ಪಿ.ಇ ಸಂಸ್ಥೆಯ ಕೃಷ್ಣಮೂರ್ತಿ ಭಟ್ ಶಿವಾನಿ ಮಾಹಿತಿ ನೀಡಿದರು.
1964 ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಕಳೆದ 62 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಎ ಪ್ಲಸ್’ ಮಾನ್ಯತೆ ಪಡೆದ ಈ ಸಂಸ್ಥೆಯು ಇಂದು ಮೂರು ತಲೆಮಾರಿನ ವಿದ್ಯಾರ್ಥಿಗಳನ್ನು ಕಂಡಿದೆ. ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದೆ.
ಏಪ್ರಿಲ್ 4 ರಂದು ಉದ್ದಿಮೆದಾರರು ಕಾಲೇಜಿನ ಪೂರ್ವ ವಿದ್ಯಾರ್ಥಿ ಆನಂದ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಕಲ್ಮಾಡಿ ಆಸ್ಸೆಮ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಪವನ್ ಕಿರಣಕೆರೆ ಆಗಮಿಸಲಿದ್ದಾರೆ. ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸ್ಮರಣ ಸಂಚಿಕೆ ಬಿಡುಗಡೆ, ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಹಾಗೂ ‘ಎಸ್.ಡಿ.ಎಂ ಪಯಣ’ ಕಿರುಚಿತ್ರ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 5 ರಂದು ಆರಂಭದ ಐದು ಬ್ಯಾಚ್‌ಗಳ (1964-68) ವಿದ್ಯಾರ್ಥಿಗಳಿಗೆ ಹಾಗೂ ವಿಶ್ವವಿದ್ಯಾಲಯ ಮಟ್ಟದ ಶೈಕ್ಷಣಿಕ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಎಚ್.ಎನ್. ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರತಿಯೊಂದು ಶಿಕ್ಷಣ ಸಂಸ್ಥೆಗೆ ಅದರ ಹಳೆಯ ವಿದ್ಯಾರ್ಥಿಗಳೇ ಬೆನ್ನೆಲುಬು. ಅವರ ಸಹಕಾರದಿಂದ ನಮ್ಮ ಸಂಸ್ಥೆ ಇನ್ನು ಹೆಚ್ಚಿನ ಸಾಧನೆ ಮಾಡಲಿದೆ. ಈ ಸಂಭ್ರಮಕ್ಕೆ ಪ್ರತಿಯೊಬ್ಬರೂ ಸಾಕ್ಷಿಯಾಗಬೇಕು. ಎರಡೂ ದಿನವು ಬೆಳಿಗ್ಗೆ 8:00 ರಿಂದ ರಾತ್ರಿ 9:00 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂವಾದ, ವೃತ್ತಿ ಮಾರ್ಗದರ್ಶನ ಹಾಗೂ ರಂಗೋಲಿ ಪ್ರದರ್ಶನಗಳು ನಡೆಯಲಿದ್ದು, ಲಘು ಉಪಾಹಾರ, ಭೋಜನವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾಗರಾಜ ಕಾಮತ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕಾಮತ್, ಸಂಘದ ಕಾರ್ಯದರ್ಶಿ ಡಿ.ಎಲ್.ಹೆಬ್ಬಾರ, ಪದವಿ ಪ್ರಾಚಾರ್ಯ ಡಾ. ಜಿ.ಎಂ.ಭಟ್ ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೊಡ್ ಹೊನ್ನಾವರ

More Stories
ಅತ್ಯುತ್ತಮ ಸೇವೆ: ನವೀನ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ ಪ್ರದಾನ
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಮೂವರು ಬಂಧನ
ಅಳೇಕೋಡಿ ಬಂದರಿನಲ್ಲಿ ದುರಂತ: ಮೀನುಗಾರಿಕೆಗೆ ತೆರಳಿದ ಯುವಕ ಸಮುದ್ರದಲ್ಲಿ ನಾಪತ್ತೆ