April 4, 2026

ಶಿರಸಿಯಲ್ಲಿ ‘ಪ್ರತಿಬಿಂಬ’ ಕಾರ್ಯಕ್ರಮ – ಸ್ಪರ್ಧೆಗಳ ನೊಂದಣಿ ಅವಧಿ ಏಪ್ರಿಲ್ 3ರವರೆಗೆ ವಿಸ್ತರಣೆ

ಶಿರಸಿ: ಹವ್ಯಕ ಸಮುದಾಯದ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಏಪ್ರಿಲ್ 5ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಲಯನ್ಸ್ ಸಭಾಭವನದಲ್ಲಿ ‘ಪ್ರತಿಬಿಂಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಈ ಕಾರ್ಯಕ್ರಮದ ಅಂಗವಾಗಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತರ ನೊಂದಣಿ ಅವಧಿಯನ್ನು ಏಪ್ರಿಲ್ 3ರವರೆಗೆ ವಿಸ್ತರಿಸಲಾಗಿದೆ ಎಂದು ಮಹಾಸಭೆ ಪ್ರಕಟಿಸಿದೆ.
ವಿಭಿನ್ನ ವಯೋಮಿತಿಗಳಿಗೆ ಅನುಗುಣವಾಗಿ ಹಲವು ಸ್ಪರ್ಧೆಗಳು ಆಯೋಜಿಸಲಾಗಿದ್ದು, 6 ವರ್ಷದೊಳಗಿನ ಮಕ್ಕಳಿಗೆ ಶ್ಲೋಕ ಪಠಣ, ಛದ್ಮವೇಷ, ಬಣ್ಣ ತುಂಬುವ ಸ್ಪರ್ಧೆಗಳು ನಡೆಯಲಿವೆ. 7ರಿಂದ 12 ವರ್ಷದವರಿಗೆ ಭಗವದ್ಗೀತೆ 2ನೇ ಅಧ್ಯಾಯ ಕಂಠಪಾಠ, ಹವ್ಯಕರ ಗ್ರಾಮೀಣ ಬದುಕು ಕುರಿತ ಚಿತ್ರಕಲೆ, ಏಕಪಾತ್ರಾಭಿನಯ ಹಾಗೂ ಯೋಗಾಸನ ಸ್ಪರ್ಧೆಗಳು ಇರುತ್ತವೆ.


13ರಿಂದ 18 ವರ್ಷದವರಿಗಾಗಿ ರಾಮಾಯಣ, ಮಹಾಭಾರತ ಹಾಗೂ ಸಾಮಾನ್ಯ ಜ್ಞಾನದ ರಸಪ್ರಶ್ನೆ, ಆಶುಭಾಷಣ, ದೇಶಭಕ್ತಿಗೀತೆ, ಗ್ರಾಮೀಣ ಪ್ರದೇಶಗಳಲ್ಲಿ ಹವ್ಯಕರ ಸ್ವ-ಉದ್ಯಮ ಸಾಧ್ಯತೆ ಕುರಿತು ಚರ್ಚಾ ಸ್ಪರ್ಧೆ ಹಾಗೂ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸಾಮಾನ್ಯ ವಿಭಾಗದವರಿಗೆ ಹವ್ಯಕ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಜಾನಪದ ಗೀತೆ, ಹವಿಗನ್ನಡ ಆಶುಭಾಷಣ, ಹವಿರುಚಿ ಸ್ಪರ್ಧೆ ಮತ್ತು ಕರಕುಶಲ ವಸ್ತು ಪ್ರದರ್ಶನ ನಡೆಯಲಿದೆ.
ಇದಲ್ಲದೆ, ಪ್ರತಿಭಾವಂತರಿಗೆ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ‘ಪ್ರತಿಭಾ ಪ್ರದರ್ಶನ’ ಎಂಬ ವಿಶೇಷ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ. ಯಕ್ಷನೃತ್ಯ, ಭರತನಾಟ್ಯ, ಸಂಗೀತ ವಾದ್ಯ ವಾದನ, ವಿಶಿಷ್ಟ ಚಿತ್ರಕಲೆ, ಮಿಮಿಕ್ರಿ, ಜಾದೂ ಮುಂತಾದ ಕಲಾಪ್ರದರ್ಶನಗಳಿಗೂ ಅವಕಾಶ ನೀಡಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತರು ವಾಟ್ಸ್ಯಾಪ್ ಸಂಖ್ಯೆ 9480356364ಕ್ಕೆ ಸಂಪರ್ಕಿಸಬಹುದು ಎಂದು ಮಹಾಸಭೆಯ ನಿರ್ದೇಶಕರಾದ ಶ್ರೀಕಾಂತ ಭಟ್ಟ ಹಾಗೂ ಶಶಾಂಕ ಹೆಗಡೆ ತಿಳಿಸಿದ್ದಾರೆ.

About The Author

error: Content is protected !!