ಭಟ್ಕಳ: ಜ್ಞಾನಯೋಗ, ಕರ್ಮಯೋಗ ಹಾಗೂ ಭಕ್ತಿಯೋಗದ ಮೂಲಕ ಭಗವಂತನನ್ನು ಅರಿಯಬಹುದಾದರೂ, ಭಕ್ತಿಯೋಗವೇ ಅತ್ಯಂತ ಸುಲಭ ಮತ್ತು ಸರಳ ಮಾರ್ಗವಾಗಿದೆ ಎಂದು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ೧೦೦೮ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಹೇಳಿದರು.
ತಾಲೂಕಿನ ಸಾರದಹೊಳೆ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವರ ನಾಲ್ಕನೇ ವರ್ಷದ ವರ್ಧಂತ್ಯೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಅನನ್ಯ ಭಕ್ತಿಯಿಂದ ಭಗವಂತನನ್ನು ಚಿಂತಿಸಿದರೆ ಭಕ್ತನ ಯೋಗಕ್ಷೇಮವನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದು ಹೇಳಿದರು. ದಿನನಿತ್ಯ ಕನಿಷ್ಠ ಒಂದು ಗಂಟೆಯಾದರೂ ಧ್ಯಾನದಲ್ಲಿ ತೊಡಗಿಸಿಕೊಂಡರೆ ದೈವಕೃಪೆಗೆ ಪಾತ್ರರಾಗಬಹುದು ಎಂದು ಸಲಹೆ ನೀಡಿದರು.
ನಾಮಧಾರಿ ಪೀಠವು ದೇಶ-ವಿದೇಶಗಳಲ್ಲಿ ಒಂದು ಕೋಟಿಗೂ ಅಧಿಕ ಭಕ್ತರನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸನಾತನ ಧರ್ಮವು ಜಗತ್ತಿಗೆ ಬೆಳಕು ನೀಡುವ ಧರ್ಮವಾಗಿದ್ದು, ಹಿಂದುಳಿದ ವರ್ಗಗಳು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ, ಸಂಕಷ್ಟದ ಸಂದರ್ಭದಲ್ಲಿ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಪ್ರಾರ್ಥಿಸಿದರೆ ಅನುಗ್ರಹ ಖಚಿತ ಎಂದು ಹೇಳಿದರು. ದೇವಸ್ಥಾನದ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಸಲ್ಲಿಸಿರುವ ಸುಮಾರು ನಾಲ್ಕು ಕೋಟಿ ರೂ.ಗಳ ಕಾಮಗಾರಿಗಳ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ದೇವಸ್ಥಾನದ ಮೋಕ್ತೆಸರರಾದ ಸುಬ್ರಾಯ ನಾಯ್ಕ ಅವರು ಮಾತನಾಡಿ, ಸಚಿವರು ದೇವಸ್ಥಾನದ ಭಕ್ತರಾಗಿದ್ದು ಅಭಿವೃದ್ಧಿಗೆ ವೈಯಕ್ತಿಕ ಸಹಾಯ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಚಿವರನ್ನು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾವಳ್ಳಿ ಹೋಬಳಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ರಾಜು ನಾಯ್ಕ, ಮಾಜಿ ಅಧ್ಯಕ್ಷ ಆರ್.ಕೆ. ನಾಯ್ಕ, ಕಾರ್ಯದರ್ಶಿ ರವೀಂದ್ರ ನಾಯ್ಕ, ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ಅತ್ಯುತ್ತಮ ಸೇವೆ: ನವೀನ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ ಪ್ರದಾನ
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಮೂವರು ಬಂಧನ
ಅಳೇಕೋಡಿ ಬಂದರಿನಲ್ಲಿ ದುರಂತ: ಮೀನುಗಾರಿಕೆಗೆ ತೆರಳಿದ ಯುವಕ ಸಮುದ್ರದಲ್ಲಿ ನಾಪತ್ತೆ