
ಶರಾವತಿ ಪಂಪ್ಡ ಸ್ಟೋರೇಜ ಭೂಗತ ಜಲ ವಿದ್ಯುತ ಯೋಜನೆ ಪರಿಸರ ಸೂಕ್ಷ್ಮ ಶರಾವತಿ ನದಿ ಕಣಿವೆಯ ಪಶ್ಚಿಮಘಟ್ಟಕ್ಕೆ ಮಾರಕವಾಗಿದ್ದು ಪರಿಸರ ಮತ್ತು ಜನರ ಬದುಕಿನೊಂದಿಗೆ ಚೆಲ್ಲಾಟ ಬೇಡ. ಯೋಜನೆಗೆ ಶರಾವತಿ ನದಿ ಕಣಿವೆ ಹೋರಾಟ ಸಮಿತಿಯ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹೊನ್ನಾವರ : ಈ ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನ ವರದಿ ಸಂಪೂರ್ಣ ತಪ್ಪು ಹಾಗೂ ಜನರನ್ನು ದಾರಿತಪ್ಪಿಸುವ,ಯೋಜನಾ ಪರವಾದ ವರದಿ ಮಾತ್ರ ಆಗಿದೆ. ಸಂಪೂರ್ಣ ಸುಳ್ಳಿನ ಜೊಳ್ಳು ವರದಿಯಿದು ಎಂದು ಪರಿಸರ ಪರಿಣಾಮ ಮೌಲ್ಯಮಾಪನ ವರದಿಗೆ ನಮ್ಮ ಶರಾವತಿ ನದಿ-ಕಣಿವೆ ಉಳಿಸಿ ಹೋರಾಟ ಸಮಿತಿಯು ಈ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ
ಉದ್ದೇಶಿತ ಯೋಜನೆಯ ಕುರಿತು ಇದೇ ಸಪ್ಟಂಬರ 18 ರಂದು ಗೇರುಸೊಪ್ಪೆಯ ಉಪ್ಪಿನಗುಳಿಯಲ್ಲಿ ನಡೆಯುವ ಸಾರ್ವಜನಿಕ ಅಹವಾಲು ಆಲಿಕೆ ಸಭೆಯ ಪೂರ್ವದಲ್ಲೇ ಯೋಜನೆಯ ಮಾರಕ ಪರಿಣಾಮಗಳ ಕುರಿತು ಹೋರಾಟ ಸಮಿತಿ ಜಿಲ್ಲಾಧಿಕಾರಿಗಳಿಗೆ ತನ್ನ ಅಭಿಪ್ರಾಯವನ್ನು ನೀಡಿದೆ. ಅಹವಾಲು ಆಲಿಕೆ ಸಭೆಯಲ್ಲಿಯೂ ಸಹ ಅಂಕಿ ಅಂಶಗಳ ಸಹಿತ ಸಮಿತಿ ಮನವಿ ಸಲ್ಲಿಸಲಿದೆ. ಸಾರ್ವಜನಿಕರೂ ಸಹ ಅಂದು ಅಹವಾಲು ಆಲಿಕೆ ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ದಾಖಲಿಸಬೇಕು.
ಯಾವುದೇ ಬ್ರಹತ್ ಅಭಿವ್ರದ್ಧಿ ಯೋಜನೆ ಜ್ಯಾರಿ ಮಾಡುವಾಗ ಯೋಜನೆಯ ವ್ಯಾಪ್ತಿ ಪ್ರದೇಶವನ್ನು ಗುರುತಿಸಲಾಗುತ್ತದೆ. ಆದರೆ ಶರಾವತಿ ಕಣಿವೆಯ ಗೇರುಸೊಪ್ಪದಿಂದ ಕೆಳಗೆ ಶರಾವತಿ ನದಿಪಾತ್ರದ ಹಳ್ಳಿಗಳು, ರೈತರು,ಮೀನುಗಾರರು,ಜನಸಮುದಾಯದ ಮೇಲೆ,ನದಿಪರಿಸ್ಥಿತಿಮೇಲೆ ಉದ್ದೇಶಿತ ಭೂಗತ ಯೋಜನೆ ಏನೆಲ್ಲ ದುಷ್ಪರಿಣಾಮ ಬೀರಲಿದೆ ಎಂಬ ಕನಿಷ್ಟ ಪ್ರಸ್ತಾಪವನ್ನೇ ಯೋಜನಾ ವರದಿಯಲ್ಲಿ ಹೇಳಲಾಗಿಲ್ಲ. ಗೇರುಸೊಪ್ಪೆ ಜಲಾಶಯದ ನೀರು ನಿರ್ವಹಣೆಯಲ್ಲಿನ ಕೆ.ಪಿ.ಸಿ.ಯ ಲೋಪದಿಂದಾಗಿ ಸಮುದ್ರದ ಉಪ್ಪುನೀರು ಬೇಸಿಗೆಯಲ್ಲಿ ಈಗಾಗಲೇ 15ಕೀ.ಮೀ.ವ್ಯಾಪ್ತಿಯಲ್ಲಿ ನದಿಗೆ ಸೇರುತ್ತಿದ್ದು ಅದರಿಂದ ಸಾವಿರಾರು ರೈತರು ಮತ್ತು ಜನಸಾಮಾನ್ಯರು ಬವಣೆ ಪಡುತ್ತಿದ್ದಾರೆ.
ಉದ್ದೇಶಿಸಿತ ಪಂಪ್ಡ ಸ್ಟೋರೇಜ ಯೋಜನೆಯ ಜಾರಿಯಿಂದ ಸಮುದ್ರದ ಉಪ್ಪುನೀರು ಗೇರುಸೊಪ್ಪೆವರೆಗಿನ ನದಿ ನೀರಿಗೆ ಹಿಮ್ಮುಖವಾಗಿ ಸೇರಲಿದೆ ಎಂಬ ವಿಜ್ಞಾನಿಗಳ ಅಭಿಪ್ರಾಯವನ್ನು ಪರಿಸರ ಇಲಾಖೆ, ಸಿ ಆರ್ ಜೆಡ್ ಪ್ರಾಧಿಕಾರ ಪರಿಗಣಿಸಿಲ್ಲ. ಈ ದಿಶೆಯಲ್ಲಿ ಪುನರ್ ಪರಿಶೀಲನೆಯೊಂದಿಗೆ ಅಗತ್ಯ ಅಧ್ಯಯನ ಆಗದೇ ಯೋಜನೆಯ ಅನುಷ್ಠಾನಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ತನ್ನ ಅನುಮತಿ ನೀಡಬಾರದು. ಶರಾವತಿ ನದಿ ಕಣಿವೆಯ ಪರಿಸರ ಸೂಕ್ಷ್ಮ ಪ್ರದೇಶದ ಭೂಗರ್ಭದಲ್ಲಿ ಸುಮಾರು ಮುವ್ವತ್ತು ಅಡಿ ವ್ಯಾಸದಲ್ಲಿ ಸುಮಾರು 14 ಕಿಲೋಮೀಟರ್ ಉದ್ದಕ್ಕೆ ವಿವಿಧ ಸ್ಪೋಟಕಗಳನ್ನು ಬಳಸಿ ಸುರಂಗ ನಿರ್ಮಿಸುವುದರಿಂದ ಆ ಪ್ರದೇಶದ ಸುತ್ತಮುತ್ತ ಭೂ ಸಡಿಲಿಕೆಯಾಗುವ ಮತ್ತು ಅದರಿಂದ ಭವಿಷ್ಯದಲ್ಲಿ ಭೂಕುಸಿತ ಸಂಭವಿಸಿ ಸಾವಿರಾರು ಜನರ ಜೀವ ಹಾನಿ ಸಹಿತ ಆಣೆಕಟ್ಟೆಗಳ ಸುರಕ್ಷತೆಗೂ ಅಪಾಯವನ್ನು ತರಬಲ್ಲದು ಎನ್ನುವ ವಿಜ್ಞಾನಿಗಳ, ತಜ್ಞರ ಎಚ್ಚರಿಕೆಯ ಅಂಶಗಳ ಕುರಿತಾದರೂ ಪರಿಸರ ಪರಿಣಾಮ ವರದಿಯಲ್ಲಿ ವಿವರಣೆ ಎದ್ದು ಕಾಣಬೇಕಿತ್ತು. ಕೆ.ಪಿ.ಸಿ.ಯ ಭೂಗತ ಜಲವಿದ್ಯುತ ಯೋಜನೆಯಿಂದ ಒಂದು ಲಕ್ಷ ರೈತರು,ಮೀನುಗಾರರು ಬೆಳೆ ಬೆಳೆಯಲಾರದ,ಮೀನು ಕ್ಷಾಮ ಎದುರಿಸುವ,ಉಪ್ಪುನೀರು ಕುಡಿಯುವ ಪರಿಸ್ಥಿತಿಗೆ ಬರುತ್ತಾರೆ. ಬ್ರಹತ್ ಯೋಜನೆಗಳನ್ನು ಜಿಲ್ಲೆಯ ಜನರ ಮೇಲೆ ,ಪರಿಸರದ ಮೇಲೆ ಅತಿಯಾಗಿ ಹೇರುತ್ತಲೇ ಇರುವ ರಾಜ್ಯ ಮತ್ತು ಕೇಂದ್ರ ಸರಕಾರಗಳು ತೋರಿಕೆಗೆ ಅಹವಾಲು ಆಲಿಕೆ ಸಭೆ ನಡೆಸುತ್ತಿವೆ ಎನ್ನುವ ಅನುಮಾನ ಮತ್ತು ಸಾರ್ವಜನಿಕ ಅಭಿಪ್ರಾಯಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕು. ಯೋಜನೆಗೆ ಅರಣ್ಯ ತಿರುವು ಮತ್ತು ಎನ್‌ಬಿಡಬ್ಲುಎಲ್ ಅನುಮೋದನೆಯ ಅಗತ್ಯವಿದೆ. ಆದರೂ ಉದ್ದೇಶಿತ ಯೋಜನೆಯು ಸಾರ್ವಜನಿಕ ಅಹವಾಲು ಸಭೆಯ ಹಂತವನ್ನು ತಲುಪಿದೆ. ಅಹವಾಲು ಆಲಿಕೆ ಸಭೆಯ ಮುನ್ನವೇ ಕಾಮಗಾರಿಯ ಅನುಷ್ಠಾನಕ್ಕೆ ಗುತ್ತಿಗೆದಾರರ ನಿಯೋಜನೆ ಮಾಡಿರುವದು ಅಹವಾಲು ಆಲಿಕೆ ಸಭೆ ಕೇವಲ ನಾಮಕಾವಾಸ್ತೆಗೆ ಎನ್ನುವ ಅನುಮಾನಕ್ಕೆ ಪುಷ್ಠಿ ನೀಡುತ್ತದೆ. ಈ ಯೋಜನೆ ಬದಲಾಗಿ ಕರಾವಳಿ ಮತ್ತು ಮಲೆನಾಡಿನ ಹಳ್ಳಿಗಳ ಮನೆಗಳಿಗೆ ಛಾವಣಿ ಸೋಲಾರ್ ವಿದ್ಯುತ್ ನೀಡಲು ಮತ್ತು ಪರಿಸರಕ್ಕೆ ಹಾನಿಯಾಗದ ಬದಲೀ ಸುರಕ್ಷಿತ ಇಂಧನ ಮೂಲಗಳ ಯೋಜನೆಯ ಜ್ಯಾರಿಗೆ ಕೆ.ಪಿ.ಸಿ. ಮುಂದಾಗಬೇಕೆAದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೋರಾಟ ಸಮಿತಿಯು ಆಗ್ರಹಿಸುತ್ತಿದೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ