November 19, 2025

ನರೇಗಾ ಸಕ್ರಿಯ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ; ಡಾ. ದಿಲೀಷ್ ಶಶಿ

ಭಟ್ಕಳ:– ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಕ್ರಿಯ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಅಕ್ಟೋಬರ್ 31 ರ ಒಳಗೆ ಕಡ್ಡಾಯವಾಗಿ ಶೇ.100 ರಷ್ಟು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಸೂಚನೆ ನೀಡಿದರು.

ಅವರು ಭಟ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸೂಚನೆಯಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಗಳನ್ನು ಇ-ಕೆವೈಸಿ ಮೂಲಕ ಮೌಲ್ಯೀಕರಿಸುತ್ತಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳ ಸಕ್ರಿಯ ಕೂಲಿಕಾರರ ಇಕೆವೈಸಿಯನ್ನು ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಪೂರ್ಣಗೊಳಿಸಬೇಕು ಎಂದರು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಕರ ಸಂಗ್ರಹಕ್ಕೆ ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟು ಮತ್ತು ಮನೆಗಳಿಗೆ ಕರ ನಿಗದಿ ಪಡಿಸಿ ತೆರಿಗೆ ವಸೂಲಿ ಮಾಡಬೇಕು ಮತ್ತು ಸಂಗ್ರಹಿಸಿದ ಕಸವನ್ನು ಮಾರಿ ಆದಾಯ ವೃದ್ಧಿಸಿಕೊಳ್ಳಬೇಕು. ಆ ಮೂಲಕ ಗ್ರಾಮ ಪಂಚಾಯತಿಯಲ್ಲಿ ಕಸ ವಿಲೇವಾರಿಗೆ ಸಂಬಧಿಸಿದ ಖರ್ಚುಗಳನ್ನು ಸ್ವತಂತ್ರವಾಗಿ ನಿರ್ವಹಿಸುವಷ್ಟು ಆರ್ಥಿಕವಾಗಿ ಸಶಕ್ತವಾಗಬೇಕು ಎಂದರು.

ಸಭೆಯಲ್ಲಿ ಮನರೇಗಾ ಯೋಜನೆ, ಸ್ವಚ್ಛ ಭಾರತ ಮಿಷನ್, ಕರ ವಸೂಲಿ, ವಸತಿ, ಜೆಜೆಎಮ್, ಗ್ರಂಥಾಲಯ, ಕೂಸಿನ ಮನೆ, ಹದಿನೈದನೇ ಹಣಕಾಸು, ನಲ್ ಜಲ್ ಮಿತ್ರ, ಹೆಸ್ಕಾಂ ಬಿಲ್ ಪಾವತಿ, ಇ-ಹಾಜರಾತಿ, ಎನ್.ಆರ್.ಎಲ್.ಎಮ್, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಯೋಜನೆ ಮತ್ತು ವಿಷಯಗಳ ಪ್ರಗತಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ಎಮ್ ಎಸ್ ಅಲ್ಲಾಭಕ್ಷ, ಯೋಜನಾ ನಿರ್ದೇಶಕ ಕರೀಂ ಅಸದಿ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ವಿಷಯ ನಿರ್ವಾಹಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

About The Author

error: Content is protected !!