ವೇಗದ ಅಜಾಗರೂಕತೆಗೆ ಬಲಿಯಾದ ಒಂದು ಕುಟುಂಬ, ಮೂವರು ಮಕ್ಕಳು ತಂದೆ-ತಾಯಿಯಿಲ್ಲದ ಮೌನದಲ್ಲಿ.
ಬೆಂಗಳೂರು/ಭಟ್ಕಳ: ಆಂಬ್ಯುಲೆನ್ಸ್ ಅಪಘಾತದಿಂದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಶಾಂತಿನಗರದ ಕೆ. ಹೆಚ್. ರಸ್ತೆಯ ಸಂಗೀತಾ ಸಿಗ್ನಲ್ ಬಳಿ ಸಂಭವಿಸಿದೆ. ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವ ಆರೋಪ ಕೇಳಿಬಂದಿದ್ದು, ದ್ವಿಚಕ್ರ ವಾಹನದಲ್ಲಿದ್ದ ಮೃತರನ್ನು ಇಸ್ಮಾಯಿಲ್ ನಾಥರ್ ದಾಬಾಪು (40) ಮತ್ತು ಅವರ ಪತ್ನಿ ಸಮೀನ್ ಬಾನು ಎಂದು ಗುರುತಿಸಲಾಗಿದೆ.


ಇವರು ಭಟ್ಕಳದ ಬಂಡರ್ ರೋಡ್ 2ನೇ ಕ್ರಾಸ್ ಹಾಗೂ 5ನೇ ಕ್ರಾಸ್ ನಿವಾಸಿಗಳಾಗಿದ್ದರು. ರಿಚ್ಮಂಡ್ ರಸ್ತೆಯ ಕಡೆಯಿಂದ ವೇಗವಾಗಿ ಬಂದ ಆಂಬ್ಯುಲೆನ್ಸ್ ಚಾಲಕ, ಊರ್ವಶಿ ಚಿತ್ರಮಂದಿರ ಕಡೆಯಿಂದ ವಿಲ್ಸನ್ ಗಾರ್ಡನ್ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪಘಾತವೆಸಗಿದ್ದಾನೆ. ಅಲ್ಲದೆ ಆಂಬ್ಯುಲೆನ್ಸ್ ಕೆಳಗೆ ಸಿಲುಕಿದ್ದ ದ್ವಿಚಕ್ರ ವಾಹನವನ್ನು 20- 30 ಮೀಟರ್ ಎಳೆದುಕೊಂಡು ಚಲಾಯಿಸಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸ್ ಚೌಕಿಗೆ ಗುದ್ದಿ ಆಂಬ್ಯುಲೆನ್ಸ್ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಬಂದು ಆಂಬ್ಯುಲೆನ್ಸ್ ಪಲ್ಟಿ ಮಾಡಿ ಪರಿಶೀಲಿಸಿದಾಗ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಆಂಬ್ಯುಲೆನ್ಸ್ ಅಡಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಟ್ರಾಫಿಕ್ ಪೊಲೀಸ್ ಚೌಕಿಗೆ ಗುದ್ದುವ ಮುನ್ನ ಆಂಬ್ಯುಲೆನ್ಸ್ ಇನ್ನೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಸವಾರರಾದ ರಿಯಾನ್ ಹಾಗೂ ಸಿದ್ದಿಕ್ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಚಾಲಕ ಅಶೋಕ್, ಅಪಘಾತದ ನಂತರ ಪರಾರಿಯಾಗಿದ್ದರೂ, ಭಾನುವಾರ ಬೆಳಿಗ್ಗೆ ಪೊಲೀಸರ ಬಲೆಗೆ ಸಿಕ್ಕಿದ್ದಾನೆ.
ಘಟನೆಯ ಕುರಿತು ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದಂಪತಿಗಳ ಪಾರ್ಥಿವ ಶರೀರವನ್ನು ಭಾನುವಾರ ರಾತ್ರಿ ಭಟ್ಕಳಕ್ಕೆ ತರಲಾಗಿದ್ದು, ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಂಪತಿಗಳು ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶನಿವಾರ ರಾತ್ರಿ ತನಕ ಮಾತನಾಡುತ್ತಿದ್ದವರು, ಭಾನುವಾರದ ಬೆಳಿಗ್ಗೆ ಶವಪೆಟ್ಟಿಗೆಯಲ್ಲಿದ್ದಾಗ ಊರೇ ಶೋಕಮಗ್ನವಾಯಿತು. ಬಂದರ್ ರಸ್ತೆಯ ಅಂಗಳದಲ್ಲಿ ಕಣ್ಣೀರು ತಡೆಹಿಡಿಯಲಾಗದ ವಾತಾವರಣ. ಜೀವ ಉಳಿಸಬೇಕಾದ ಆಂಬ್ಯುಲೆನ್ಸ್ ಜೀವ ಕಸಿದುಕೊಂಡಿದೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ