November 19, 2025

ಗೃಹೋಪಯೋಗಿ ವಸ್ತುಗಳ ಹೆಸರಿನಲ್ಲಿ ಜನರಿಗೆ ವಂಚನೆ, 180 ಮಂದಿ ಮೋಸಕ್ಕೆ ಒಳಗಾದರೆಂದು ಎಸ್‌ಪಿ ದೀಪನ್ ಎಂ.ಎನ್. ಮಾಹಿತಿ

ಭಟ್ಕಳ: ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು,10 – 40 ಶೇಕಡಾ ರಿಯಾಯಿತಿ! ಈ ಆಮಿಷದ ನುಡಿಗೆ ಜನರು ನಂಬಿ ಹಣ ಪಾವತಿಸಿದರೂ, ವಸ್ತು ಸಿಗದೇ ಈಗ ನಷ್ಟದಲ್ಲಿ ತಲೆ ಹಿಡಿದುಕೊಂಡಿದ್ದಾರೆ. ಜನರನ್ನು ಈ ರೀತಿಯಲ್ಲಿ ಮೋಸ ಮಾಡಿದ ಗ್ಲೋಬಲ್ ಎಂಟರ್‌ಪ್ರೈಸಸ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಕಾರ್‌ಸ್ಟ್ರೀಟ್‌ನ ಮಿಸ್ಥಾ ಟವರ್ ಎದುರಿನ ಕಟ್ಟಡದಲ್ಲಿ ಮೂವರು ವ್ಯಕ್ತಿಗಳು ಕಟ್ಟಡ ಮಾಲಕರ ಸಹಕಾರದಲ್ಲಿ ಅಂಗಡಿ ಆರಂಭಿಸಿದ್ದರು. ಜನರನ್ನು ರಿಯಾಯಿತಿ ಆಮಿಷದ ಮೂಲಕ ಸೆಳೆಯುವ ಇವರು ಮೊತ್ತವನ್ನು ಮುಂಗಡವಾಗಿ ಪಡೆದು ವಸ್ತು ನೀಡದೇ ಅಂಗಡಿ ಬಂದ ಮಾಡಿ ಪರಾರಿಯಾಗಿದ್ದಾರೆ.

ಪೀಡಿತರಲ್ಲಿ ಒಬ್ಬರಾದ ಮೊಹಮ್ಮದ್ ಸವೂದ್ (ತಂದೆ ಹಸನ್ ಶಬ್ಧರ್ ಮೋತ್ಯಶಾಮ್) ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ?84,270 ಮೊತ್ತ ಪಾವತಿಸಿ ವಸ್ತು ಬುಕ್ ಮಾಡಿಕೊಂಡಿದ್ದರೂ ಸಾಮಾನು ಸಿಕ್ಕಿಲ್ಲವೆಂದು ತಿಳಿಸಿದ್ದಾರೆ. ಇದೇ ರೀತಿಯಾಗಿ ಇನ್ನೂ ಹಲವರಿಂದ ಹಣ ಪಡೆದು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರು, ಪ್ರಕರಣ ದಾಖಲಾಗಿದ್ದು, ಗೋಡೌನ್ ಸೀಜ್ ಮಾಡಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಸುಮಾರು 180 ಜನರು ಮೋಸಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಗ್ರಾಹಕರಿಂದ ಒಟ್ಟಾರೆ ರೂ 14 ಲಕ್ಷ ಠೇವಣಿ ಪಡೆದಿದ್ದಾರೆ ಎನ್ನಲಾಗಿದೆ. ತನಿಖೆ ಮುಂದುವರಿದಿದ್ದು, ಇನ್ನೂ ಯಾರಾದರೂ ವಂಚನೆಗೆ ಒಳಗಾದವರು ಇದ್ದರೆ ಮಾಹಿತಿ ನೀಡಿದಲ್ಲಿ ಅವರ ದೂರನ್ನೂ ಪ್ರಕರಣಕ್ಕೆ ಸೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸರು ಆರೋಪಿತರ ಪತ್ತೆಗೆ ಬಲೆ ಬೀಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

About The Author

error: Content is protected !!