November 19, 2025

ವಿ.ಡಿ.ನಾಯಕರಿಗೆ ಬಾಪು ಸದ್ಭಾವನಾ ಪುರಸ್ಕಾರ ಪ್ರದಾನ

ಅಂಕೋಲಾ : ಇಲ್ಲಿನ ಶ್ರೀರಾಮ್ ಸ್ಟಡಿ ಸರ್ಕಲ್ಲಿನ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಸಭಾಭವನದಲ್ಲಿ ವಿಶ್ರಾಂತ ಅಧ್ಯಾಪಕ ನಾಡುಮಾಸ್ಕೇರಿ ವಿ.ಡಿ. ನಾಯಕ ವಂದಿಗೆಯವರಿಗೆ ” ಬಾಪು ಸದ್ಭಾವನಾ ಪುರಸ್ಕಾರ -2025 ” ನ್ನು ಪ್ರದಾನಗೊಳಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಟಾಪ್ ಒನ್ ಹಾಗೂ ನಾಡಿನ ಟಾಪ್ ಟೆನ್ ಸ್ಪರ್ಧಾತ್ಮಕ ತರಬೇತಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಂಕೋಲಾದ ಪ್ರತಿಷ್ಠಿತ ಶ್ರೀರಾಮ್ ಸ್ಟಡಿ ಸರ್ಕಲ್ಲಿನ ದಶಮಾನೋತ್ಸವದ ಸ್ಮೃತಿಯಾಗಿ ಗಾಂಧಿ ಶತಮಾನೋತ್ತರ ಸುವರ್ಣ ಮಹೋತ್ಸವದ ವರ್ಷದಿಂದ ಪ್ರತಿ ವರ್ಷವೂ ಅಸಮಾನ್ಯ ಸಾಧಕರನ್ನು ಗುರುತಿಸಿ, ಗಾಂಧಿ ಮಾಸದಲ್ಲಿ ಅಂಕೋಲಾದ ನವ ಕರ್ನಾಟಕ ಸಂಘದ ಸಹಯೋಗದಲ್ಲಿ ನೀಡಲಾಗುತ್ತಿರುವ “ಬಾಪು ಪದ್ಮಾವನಾ ಪುರಸ್ಕಾರ” ಕ್ಕೆ, ಈ ವರ್ಷ ನಾಡಿನ ಹೆಸರಾಂತ ಸಾಹಿತಿಗಳಾದ ಭಟ್ಕಳದ ಡಾ. ಸೈಯದ್ ಜಮೀರುಲ್ಲಾ ಷರೀಪ್ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಸಮಾಜಮುಖಿ ವ್ಯಕ್ತಿತ್ವದ ವಿಶ್ರಾಂತ ಅಧ್ಯಾಪಕರಾದ ಅಂಕೋಲಾದ ವಂದಿಗೆಯ ನಿವಾಸಿ ವಿ.ಡಿ. ನಾಯಕರವರನ್ನು ಆಯ್ಕೆ ಸಮಿತಿಯು ಆಯ್ಕೆಗೊಳಿಸಿತ್ತು.

ಕಾರ್ಯನಿಮಿತ್ತ ಷರೀಫರ ಅನುಪಸ್ಥಿತಿಯಲ್ಲಿ, ಷರೀಫರಿಗೆ ಪುರಸ್ಕಾರ ಪ್ರಧಾನವನ್ನು ನಂತರದಲ್ಲಿ ಭಟ್ಕಳದ ಅವರ ಮನೆಂಗಳದಲ್ಲಿಯೇ ಪ್ರದಾನಗೊಳಿಸಲು ನಿರ್ಧರಿಸಿ, ವಿ.ಡಿ.ನಾಯಕರಿಗೊಬ್ಬರಿಗೇ ಪುರಸ್ಕಾರ ಪ್ರದಾನವನ್ನು ಮಾಡಲಾಯಿತು.

ಕುಮಟಾದ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಖ್ಯಾತ ಯುವ ದೈಹಿಕ ಶಿಕ್ಷಣ ಶಿಕ್ಷಕರಾದ ಅಗ್ರಗೋಣದ ಗೋಪಾಲಕೃಷ್ಣ ನಾಯಕರವರು ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ – ಶುಭವನ್ನು ಕೋರಿದರು. ಶ್ರೀರಾಮ್ ಸ್ಟಡಿ ಸರ್ಕಲ್ಲಿನ ಅಧ್ಯಕ್ಷರಾದ ವಿಶ್ರಾಂತ ಕೃಷಿ ಅಧಿಕಾರಿ ಅರವಿಂದ ನಾಯಕರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಅಂಕೋಲಾದ ನವ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರು ಆಶಯ ನುಡಿಯನ್ನು ಆಡಿದರು. ಹಿರೇಗುತ್ತಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ನೇತ್ರಾವತಿ ನಾಯಕ ಹಾಗೂ ಗೋಖಲೆ ಜನ್ಮ ಶತಾಬ್ದಿ ಮಹಾವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ನಾಗೇಶದೇವ ಅಂಕೋಲೇಕರವರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀರಾಮ್ ಸ್ಟಡಿ ಸರ್ಕಲ್ ನ ನಿರ್ದೇಶಕರಾದ ಸೂರಜ್ ಅರವಿಂದ್ ಸ್ವಾಗತಿಸಿ – ವಂದಿಸಿದರು. ಕನ್ನಡ ಚಂದ್ರಮದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿಯವರು ನಿರೂಪಿಸಿದರು.

ಸಮಾರಂಭದಲ್ಲಿ ವಿಶ್ರಾಂತ ಉಪ ನಿರ್ದೇಶಕರಾದ ನಾಗರಾಜ ನಾಯಕ ಅಡಿಗೋಣ, ಜಗದೀಶ ಮಾಸ್ಟರ್ ಹಿರೇಗುತ್ತಿ, ಅನಿತಾ ಸೂರಜ್, ಶ್ರೀನಿವಾಸ ನಾಯಕ ನಾಡುಮಾಸ್ಕೇರಿ, ಕರ್ನಾಟಕ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ ನಾಯಕ, ನಿವೃತ್ತ ಶಿಕ್ಷಕರಾದ ಜಿ. ಆರ್. ನಾಯಕ ವಂದಿಗೆ, ಅವರ್ಸಾದ ಶ್ರೀ ಕಾತ್ಯಾಯನಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ವಿನಾಯಕ ನಾಯಕ ಹಾಗೂ ಡಾ. ಶಿವಾನಿ ಮೊದಲಾದವರಿದ್ದರು.

About The Author

error: Content is protected !!