November 19, 2025

ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”

ಹೊನ್ನಾವರ: “ಮನುಷ್ಯ ಎಷ್ಟೇ ಬೆಳೆದರೂ ಮಾನವೀಯತೆಗೆ ಮಹತ್ವ ಕೊಡಬೇಕೆಂದು ತೇಜಸ್ವಿಯವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಪ್ರತಿಪಾದಿಸಿದ್ದಾರೆ ” ಎಂದು ಸಾಹಿತಿ ಗಣೇಶ ಪಿ. ನಾಡೋರ ಅಭಿಪ್ರಾಯಪಟ್ಟರು.

ಹೊನ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಡಾ.ದಿನಕರ ದೇಸಾಯಿ ಗ್ರಾಮ ಪಂಚಾಯತಿ ಗ್ರಂಥಾಲಯ ಕೆರೆಕೋಣ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಕೆರೆಕೋಣ ಗ್ರಂಥಾಲಯದಲ್ಲಿ ಆಯೋಜಿಸಿದ್ದ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಾನವೀಯ ಅಂತಃಕರಣ ಹೊಂದಿರುವ ವಿರಳ ಸಾಹಿತಿಗಳಲ್ಲಿ ಒಬ್ಬರಾದ ತೇಜಸ್ವಿಯವರು ಮಾನವೀಯ ಸಿದ್ಧಾಂತಕ್ಕೆ ಮಹತ್ವ ನೀಡಿದ್ದಾರೆ’ ಎಂದರು. ಪೂರ್ಣಚಂದ್ರ ತೇಜಸ್ವಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ವಿನಾಯಕ ನಾಯ್ಕ ‘ತೇಜಸ್ವಿಯವರ ಬರಹ ಸರಳವಾಗಿದ್ದು ಮಕ್ಕಳು, ಯುವಕರಿಂದ ಹಿರಿಯರಿಗೂ ತಟ್ಟುತ್ತದೆ. ಕುತೂಹಲ ಮೂಡಿಸಿ ತಣಿಸುತ್ತದೆ. ತಮ್ಮ ಸಾಹಿತ್ಯದ ಮೂಲಕ ಪರಿಸರ ರಕ್ಷಣೆ ನಮ್ಮ ಧರ್ಮ ಎಂದು ಸಾರಿದ್ದಾರೆ’ ಎಂದರು.

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್. ಎಂ. ಮಾರುತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಪತ್ರಕರ್ತ ಎಚ್.ಎಂ. ಮಾರುತಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ನಿಂದಾಗಿ ಓದುವಿಕೆ ಕಡಿಮೆಯಾಗುತ್ತಿದೆ. ಓದಿನ ಆಸಕ್ತಿ ಮೂಡಿಸುವಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಎಚ್. ಗೌಡ ವಹಿಸಿದ್ದರು. ಮಾಜಿ ಗ್ರಾ.ಪಂ. ಅಧ್ಯಕ್ಷ ಕೇಶವ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಅರ್ಚನಾ ಬಿ. ಭಂಡಾರಿ ಮಾತನಾಡಿದರು. ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಶೆಟ್ಟಿ, ತಾಲೂಕಾ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಜನಾರ್ಧನ ಕಾಣಕೋಣಕರ್, ಸಾಧನಾ ಭರ್ಗಿ, ಮಾಸ್ತಿ ಗೌಡ, ಗಣೇಶ ಭಂಡಾರಿ, ನಾಗರಾಜ ಶೆಟ್ಟಿ, ಮಂಜುನಾಥ ಶೆಟ್ಟಿ ಶಿವಾನಂದ ಮರಾಠಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ರಾಮ ಭಂಡಾರಿ ಸ್ವಾಗತಿಸಿ, ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!