December 23, 2025

ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಪ್ರಮುಖ ಪಾತ್ರವಹಿಸಲಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಹೊನ್ನಾವರ; ಶಿಕ್ಷಣ ಇಲಾಖೆಯ ವತಿಯಿಂದ ಮಾರ್ಥೊಮಾ ಪ್ರೌಡಶಾಲೆಯ ಆವರಣದಲ್ಲಿ ಆಯೋಜಿಸಿದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಕಾರಂಜಿಯ ಮೂಲಕ ಪೋತ್ಸಾಹಿಸುವ ಕಾರ್ಯ ಶಿಕ್ಷಣ ಇಲಾಖೆ ಮಾಡುತ್ತಿದೆ. ತಾಲೂಕಿನಲ್ಲಿರುವ ಶಿಕ್ಷಕರು ಶಿಕ್ಷಣ ಜೊತೆ ಸಹಪಠ್ಯ ವಿಭಾಗದಲ್ಲಿಯಲ್ಲಿ ಸಾಧನೆ ಮಾಡಿದವರನ್ನು ಪೊತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ. ಯಕ್ಷಗಾನ ಹಾಗೂ ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದ ತಾಲೂಕಾಗಿದ್ದು, ಶಿಕ್ಷಣದ ಜೊತೆ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದೆ ಎಂದು ಸಾಧಕರ ಕೊಡುಗೆ ಸ್ಮರಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆ ಹೊರಹೊಮ್ಮಲು ವೇದಿಕೆ ಕಲ್ಪಿಸಿ ಸರ್ವತೋಮಕ ಬೆಳವಣೆಗೆ ಸದೃಡವಾಗಿಸಲು ಇದು ನೆರವಾಗಲಿದೆ. ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಲು ಪ್ರಾಥಮಿಕ ಹಂತದಲ್ಲಿ ಸಜ್ಜುಗೊಳಿಸಲು ಇದು ಬಹುಮುಖ್ಯ ಪಾತ್ರವಹಿಸಲಿದೆ. ಮೌಲ್ಯಯುತ ಶಿಕ್ಷಣ ನೀಡುವ ಜವಬ್ದಾರಿ ಪ್ರತಿಯೋಬ್ಬರ ಮೇಲಿದ್ದು, ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತ್ರಿ ಪಡೆದ ಪಿ.ಆರ್.ನಾಯ್ಕ, ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಪಂಚಾಯತಿ ಆಡಳಿತಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ ಶಿಕ್ಷಣ ಇಲಾಖೆಯ ಹತ್ತು ಹಲವು ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯು ಬಹುಮುಖ್ಯವಾಗಿದೆ. 35 ಕ್ಕೂ ಹೆಚ್ಚಿನ ಕಾರ್ಯಕ್ರಮ ಪ್ರತಿಭಾ ಕಾರಂಜಿಯಲ್ಲಿ ಇದ್ದು, ಮಕ್ಕಳು ತಮ್ಮ ಆಸಕ್ತ ವಿಷಯದಲ್ಲಿ ಸ್ಪರ್ಧೆ ಮಾಡಬಹುದು. ಮೊಬೈಲ್ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಸಾಮರ್ಥ್ಯ, ಸಮಯವನ್ನು, ಆಸಕ್ತಿಯನ್ನು ಆಕ್ರಮಿಸುವ ವಸ್ತುವಾಗಲಿದೆ. ಮಕ್ಕಳ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರತಿಭಾ ಕಾರಂಜಿಯು ಪ್ರಮುಖವಾಗಿದೆ. ಪ್ರತಿಭಾ ಕಾರಂಜಿ ಇಲಾಖೆಯ ಕಾರ್ಯಕ್ರಮವಲ್ಲ, ಜೀವನ ನಿರ್ವಹಣಾ ಕಾರ್ಯಕ್ರಮ. ಮಕ್ಕಳು ಅಂಕ ಗಳಿಸುವ ವಸ್ತುವಾಗಿ ನಾವು ನೋಡಬಾರದು, ಅಂಕ ಗಳಿಕೆಯಿಂದ ಯಶಸ್ವಿಪೂರ್ಣ ಜೀವನ ನಡೆಸಲು ಸಾಧ್ಯವಿಲ್ಲ. ಅರ್ಥಪೂರ್ಣವಾಗಿ ಜೀವನ ನಡೆಸಲು ಪಠ್ಯದ ಜೊತೆ ಸಹಪಠ್ಯ ವಿಭಾಗದಲ್ಲಿ ತೊಡಗಿಕೊಂಡಾಗ ಮಾನಸಿಕವಾಗಿ ಸದೃಡವಾಗಲು ಸಾಧ್ಯ ಎಂದು ಪ್ರತಿಭಾ ಕಾರಂಜಿಯ ಮಹತ್ವವನ್ನು ತಿಳಿಸಿದರು.

ವೇದಿಕೆಯಲ್ಲಿ ಮಾರ್ಥೋಮಾ ಸಂಸ್ಥೆಯ ರೆ. ಫಾದರ್ ಇಶಾನ್ ಜೊಸ್ವಾಲ್, ಕರ್ಕಿ ಗ್ರಾ.ಪಂ.ಸದಸ್ಯ ಗಜಾನನ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಪ್ರಕಾಶ ನಾಯ್ಕ, ಬಾಬು ನಾಯ್ಕ, ಸಂತೋಷ ಕುಮಾರ ಉಪಸ್ಥಿತರಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಸ್ವಾಗತಿಸಿ,ಬಿ.ಆರ್.ಸಿ ಸಮನ್ವಯಾಧಿಕಾರಿ ಜಯಶ್ರೀ ವಂದಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವಿಧ ಪ್ರಕಾರದ ಸ್ಪರ್ಧೆಗಳು ಜರುಗಿದವು.

…………
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮತಯಾಚಿಸಿದ ಶಾಸಕ ದಿನಕರ ಶೆಟ್ಟಿ

ರಾಜಕಾರಣ ಬಹಳ ಸುಲಭವಲ್ಲ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿದೆ. ಅಭಿವೃದ್ದಿ ಕಾರ್ಯಕ್ಕೆ ಹಿನ್ನಡೆ ಜೊತೆ ವಿರೋಧ ಪಕ್ಷದ ಶಾಸಕನಾಗಿರುದರಿಂದ ಹಣಕಾಸಿನ ಸಮಸ್ಯೆ ಇದೆ. ಶಿಕ್ಷಕರೆಲ್ಲರೂ ಬಹಳ ಬುದ್ದಿವಂತರಾಗಿದ್ದಾರೆ. ಅದಕ್ಕಾಗಿ ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಶಿಕ್ಷಕರಿಗೆ ಒರ್ವ ಜನಪ್ರತಿನಿಧಿಯನ್ನು ಸೋಲಿಸುವ, ಗೆಲ್ಲಿಸುವ ಸಾಮರ್ಥ್ಯ ಇದೆ. ಮುಂದಿನ ಬಾರಿಯು ನನ್ನನ್ನು ಗೆಲ್ಲಿಸಿ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಆಶ್ವಾಸನೆ ನೀಡುತ್ತಾ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಮತಯಾಚಿಸಿದರು.

About The Author

error: Content is protected !!