December 23, 2025

ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ವಿಶೇಷ ಚೇತನರ ದಿನ ಆಚರಿಸಲಾಯಿತು.

ಹೊನ್ನಾವರ : ಅತಿಥಿಯಾಗಿ ಆಗಮಿಸಿದ ಜನಾರ್ದನ ನಾಯ್ಕ ಅವರು ” ಅಂಗವೈಕಲ್ಯವು ಸಾಮಾಜಿಕವಾಗಿ ಎಲ್ಲರಂತೇ ಬೆರೆಯಲು ಸಾಧ್ಯವಾಗದೇ ಇರುವಂತೆ ಮಾಡುತ್ತದೆ. ಆದರೆ ತನ್ನ ಬಾಳಿನಲ್ಲಿ ಹಾಗಾಗಲಿಲ್ಲ. ಬಾಲ್ಯದಿಂದಲೂ ತಾನು ಇತರರಿಗಿಂತ ವಿಶೇಷವಾಗಿ ಬದುಕಬೇಕು ಎಂದು ಹಂಬಲಿಸಿದ್ದರಿAದ ಇಂದು ಕೆಮಿಕಲ್ ರಹಿತವಾದ ಹೋಂ ಪ್ರಾಡೆಕ್ಟ್ ಗಳನ್ನು ಅಡಕಾರಿನಂಥ ಹಳ್ಳಿಯಲ್ಲಿಯೇ ಉತ್ಪಾದಿಸುತ್ತಿದ್ದೇನೆ. ” ಎಂದು ತನ್ನ ಬದುಕಿನ ಮಜಲನ್ನು ತೆರೆದಿಟ್ಟರು. ಯಾವುದು ವಿಕಲತೆ ಎನಿಸುತ್ತದೆ ಅದನ್ನು ಹೇಗೆ ಮೀರಿ ನಿಲ್ಲಬೇಕು ಎಂಬ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ಇನ್ನೋರ್ವ ಅತಿಥಿ ಕಾಲೇಜಿನ ಪೂರ್ವ ವಿದ್ಯಾರ್ಥಿ ಭರತ ನಾಯ್ಕ ” ಅಂಗ ವೈಕಲ್ಯ ಇರುವವರಿಗೆ ಮಾನಸಿಕ ಸ್ಥೈರ್ಯ ಹೆಚ್ಚಿಗೆ ಇರುತ್ತದೆ. ತಾನು ಹದಿಮೂರು ವರ್ಷಗಳ ಕಲಿಕೆಯ ಹಂತದಲ್ಲಿ ಇದೇ ಸ್ಥೈರ್ಯದಲ್ಲಿಯೇ ನೋವನ್ನೂ ಮೀರಿ ಅಭ್ಯಾಸದಲ್ಲಿ ತೊಡಗಲು ಸಾಧ್ಯವಾಗಿದೆ. ಈಗ ಮನೆಯಲ್ಲೇ ಅಧ್ಯಯನ ಮಾಡಿ ಬಿ ಎ ಪದವಿ ಪರೀಕ್ಷೆ ಬರೆಯುತ್ತಿದ್ದೇನೆ. ಅಂಗಾAಗಗಳೆಲ್ಲ ಸರಿ ಇರುವ ನೀವು ನಿಮ್ಮಲ್ಲಿರುವ ಶಕ್ತಿಯನ್ನು ಅರಿತುಕೊಳ್ಳಿ. ಸಾಧನೆ ಮಾಡಿ ” ಎಂಬ ಕಿವಿಮಾತುಗಳನ್ನಾಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಜಿ ಎಸ್ ಹೆಗಡೆಯವರು ” ನಮ್ಮ ಕಾಲೇಜಿನ ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಭರತನು ಇತ್ತೀಚಿಗೆ ಕತೆಗಳನ್ನು ರಚಿಸುತ್ತ ಸಾಹಿತ್ಯಕವಾಗಿ ಅರಳುತ್ತಿದ್ದರೆ, ಜನಾರ್ದನನು ಪಂಚಾಯತದ ಉದ್ಯೋಗಿಯಾಗಿ, ಸಾಮಾಜಿಕ ಕಾರ್ಯಕರ್ತನಾಗಿ, ಇದೀಗ ಗೃಹ ಉತ್ಪನ್ನದ ಸಾಹಸಕ್ಕೆ ತೊಡಗಿ ಯಶಸ್ಸು ಕಾಣುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಊರಿನಲ್ಲಿ ಸದ್ದಿಲ್ಲದೇ ಸಾಧನೆಯಲ್ಲಿ ತೊಡಗಿರುವ ಇಂಥವರನ್ನು ಇಂದಿನ ವಿದ್ಯಾರ್ಥಿಗಳು ಗುರುತಿಸುವಂತಾಗಬೇಕು ” ಎಂದರು.

ವಿದ್ಯಾರ್ಥಿ ಶೈಬಾಸ್ ಖಾನ್ ಅನಿಸಿಕೆ ಹಂಚಿಕೊAಡರೆ, ಉಪನ್ಯಾಸಕ ಕಿಶೋರ್ ನಾಯ್ಕ " ವಿಕಲತೆಯು ಒಂದು ಸವಾಲು ಹೊರತೂ ಶಾಪವಲ್ಲ.ಆ ಸವಾಲನ್ನು ಈರ್ವರೂ ಸಮರ್ಥವಾಗಿ ಎದುರಿಸುತ್ತಿದ್ದಾರೆ " ಎಂದು ಅಭಿನಂದನಾ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಇಬ್ಬರನ್ನೂ ಗೌರವಿಸಲಾಯಿತು. ಪದ್ಮಾವತಿ ನಾಯ್ಕ ಸ್ವಾಗತಿಸಿದರು. ಅಶ್ವಿನಿ ನಾಯ್ಕ ವಂದಿಸಿದರು. ಶೇಖರ್ ನಾಯ್ಕ ನಿರೂಪಿಸಿದರು.

About The Author

error: Content is protected !!