December 23, 2025

ಕೋರಿಯರ್‌ ನೆಪದಲ್ಲಿ ಅಜ್ಜಿಯ ಚಿನ್ನದ ಸರ ಹರಿದು ಪರಾರಿ

ಭಟ್ಕಳ: ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ ಕಳ್ಳರ ಕೃತ್ಯ

ಭಟ್ಕಳ ತಾಲ್ಲೂಕಿನ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ ಕೋರಿಯರ್‌ ನೀಡುವ ನೆಪದಲ್ಲಿ ಬಂದ ಕಳ್ಳರು 70 ವರ್ಷದ ಅಜ್ಜಿಯೊಬ್ಬರ ಕುತ್ತಿಗೆಯಿಂದ ಚಿನ್ನದ ಕಿನ್ನರಿ ಸರವನ್ನು ಹರಿದು ಪರಾರಿಯಾದ ಘಟನೆ ನಡೆದಿದೆ.

ಬೆಳಕೆ ಗರಡಿ ಹಿತ್ತಲು ನಿವಾಸಿ ಹೊನ್ನಮ್ಮ ಮಾದೇವ ನಾಯ್ಕ (70) ಅವರು ಮನೆಯ ಸಮೀಪ ರಸ್ತೆಯ ಬಳಿ ಇದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಬೇರೆೊಬ್ಬರ ಹೆಸರನ್ನು ಹೇಳಿ “ಕೋರಿಯರ್‌ ಇದೆ” ಎಂದು ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಜ್ಜಿ, “ಇಲ್ಲಿ ಅಂತಹ ಯಾರೂ ವಾಸವಿಲ್ಲ” ಎಂದು ತಿಳಿಸಿದರೂ, ಕಳ್ಳರು ತಾವು ಇಲ್ಲಿಯ ಸ್ಥಳೀಯರು ಹಾಗೂ ಕೋರಿಯರ್‌ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾರೆ.

ಈ ವೇಳೆ ಕಳ್ಳರು ಅಜ್ಜಿಯ ಬಳಿ ನೀರು ಕೇಳಿದ್ದಾರೆ. ಅಜ್ಜಿ ಮನೆಯಿಂದ ನೀರು ತಂದು ಕೊಟ್ಟ ಸಂದರ್ಭದಲ್ಲಿ, ಬೈಕ್‌ನ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ನೀರು ಕುಡಿದ ಬಳಿಕ ಮತ್ತೊಮ್ಮೆ ನೀರು ತರಲು ಕೇಳಿದ್ದಾನೆ. ಅಜ್ಜಿ ಮತ್ತೆ ನೀರು ತರಲು ತಿರುಗಿದ ಕ್ಷಣದಲ್ಲೇ, ಹಿಂಬದಿ ಕುಳಿತಿದ್ದ ವ್ಯಕ್ತಿ ಅಜ್ಜಿ ಧರಿಸಿದ್ದ ಚಿನ್ನದ ಸರವನ್ನು ಹರಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಅಜ್ಜಿ ಕೂಗಿದ ಶಬ್ದ ಕೇಳಿ ಅಕ್ಕಪಕ್ಕದವರು ಕಳ್ಳರನ್ನು ಹಿಂಬಾಲಿಸಿದರೂ, ಅವರು ಶಿರೂರು ಟೋಲ್‌ಗೇಟ್‌ ಮಾರ್ಗವಾಗಿ ತಪ್ಪಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಮಹೇಶ್, ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

error: Content is protected !!