ಭಟ್ಕಳ: ‘ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಭಟ್ಕಳಕ್ಕೆ ಆಗಮಿಸಿತು.
ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ಶಿರೂರು ಮಾರ್ಗವಾಗಿ ಸಂಶುದ್ದೀನ್ ಸರ್ಕಲ್‌ಗೆ ಆಗಮಿಸಿದ ತಂಡವನ್ನು ಭಟ್ಕಳ ಭಾರತಿ ಕಿಸಾನ್ ಸಂಘ, ಬಿಜೆಪಿ ಮಂಡಲ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಭವ್ಯವಾಗಿ ಸ್ವಾಗತಿಸಿದರು.
ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಭಟ್ಕಳ ಬಿಜೆಪಿ ಮುಖಂಡ ಗೋವಿಂದ ನಾಯ್ಕ, “ಸ್ವದೇಶಿ ವಸ್ತುಗಳ ಬಳಕೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಸ್ಥಳೀಯ ಉತ್ಪನ್ನಗಳಿಗೆ ಸಹಕಾರ ನೀಡಿದರೆ ರೈತರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಸಿಗುತ್ತದೆ. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಸ್ವದೇಶಿ ಬಳಕೆಗೆ ಮುಂದಾಗಬೇಕು” ಎಂದು ಹೇಳಿದರು.
ಭಾರತಿ ಕಿಸಾನ್ ಸಂಘದ ಉತ್ತರ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ ಮಾತನಾಡಿ, “1978ರಲ್ಲಿ ಸ್ಥಾಪನೆಯಾದ ಭಾರತಿ ಕಿಸಾನ್ ಸಂಘ ಕಳೆದ 48 ವರ್ಷಗಳಿಂದ ರೈತರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಬದುಕು ಹಸನಾದರೆ ದೇಶವೂ ಸುಭಿಕ್ಷವಾಗುತ್ತದೆ. ರೈತರು, ಕಾರ್ಮಿಕರು ಹಾಗೂ ಸೈನಿಕರ ಕೊಡುಗೆ ದೇಶದ ಅಭಿವೃದ್ಧಿಗೆ ಅಪಾರ. ನಿವೃತ್ತಿಯಾದರೂ ದೇಶಸೇವೆಯಲ್ಲಿ ತೊಡಗಿರುವ ಮಾಜಿ ಸೈನಿಕರ ಈ ಸೈಕ್ಲಿಂಗ್ ಅಭಿಯಾನ ಯುವಕರಿಗೆ ಪ್ರೇರಣೆಯಾಗಿದೆ” ಎಂದರು.
ಈ ಸೈಕಲ್ ರ್ಯಾಲಿಯಲ್ಲಿ ಮೂರು ಮಹಿಳೆಯರು ಸೇರಿದಂತೆ ಒಟ್ಟು 17 ಮಂದಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿವೃತ್ತ ನೌಕರರು ಭಾಗವಹಿಸಿದ್ದಾರೆ. ಡಿಸೆಂಬರ್ 13ರಂದು ಬೆಂಗಳೂರಿನಿಂದ ಹೊರಟಿರುವ ಈ ತಂಡ ಸುಮಾರು 3,500 ಕಿಲೋಮೀಟರ್ ಪ್ರಯಾಣ ಮಾಡಿ ಪುನಃ ಬೆಂಗಳೂರಿನಲ್ಲಿ ರ್ಯಾಲಿಯನ್ನು ಮುಕ್ತಾಯಗೊಳಿಸುವ ಗುರಿ ಹೊಂದಿದೆ.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಭಾರತಿ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣ ಭಟ್, ಶ್ರೀಕಾಂತ ನಾಯ್ಕ (ಆಸರಕೇರಿ), ರಾಮಕೃಷ್ಣ ನಾಯ್ಕ, ರಾಘು ನಾಯ್ಕ (ಜಾಗರಣಾ), ದಿನೇಶ್ ನಾಯ್ಕ (ಮುಂಡಳ್ಳಿ) ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ನಾಯ್ಕ ಅವಿರೋಧವಾಗಿ ಆಯ್ಕೆ
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ