ಭಟ್ಕಳ: ನಿಚ್ಚಲಮಕ್ಕಿ ಸಭಾಭವನದಲ್ಲಿ ಶೋಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ ಆಯೋಜಿಸಿದ್ದ 2ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಭಾನುವಾರ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕರಾಟೆ ಪಟುಗಳು ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ಸ್ಪರ್ಧಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.
ಸ್ಪರ್ಧೆಯನ್ನು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಮಾತನಾಡಿದ ಅವರು, ಕರಾಟೆ ಆತ್ಮರಕ್ಷೆಯೊಂದಿಗೆ ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಕಲೆ ಎಂದು ಹೇಳಿದರು. ಮಹಿಳೆಯರು ಕರಾಟೆ ತರಬೇತಿ ಪಡೆದು ಸ್ವಯಂರಕ್ಷಣೆಯಲ್ಲಿ ಸದೃಢರಾಗಬೇಕು. ಗ್ರಾಮೀಣ ಪ್ರದೇಶಗಳಲ್ಲೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಅಗತ್ಯವಿದೆ ಎಂದರು. ಸ್ಪರ್ಧೆಗೆ ಬುನಾದಿ ಹಾಕಿದ ದಿ. ವಾಸು ನಾಯ್ಕರನ್ನು ಸ್ಮರಿಸಿ, ಕ್ರೀಡಾಪಟುಗಳು ಕ್ರೀಡಾತ್ಮಕ ಮನೋಭಾವದಿಂದ ಸ್ಪರ್ಧಿಸಬೇಕೆಂದು ಸಲಹೆ ನೀಡಿದರು.
ಜನತಾ ಬ್ಯಾಂಕ್ ನಿರ್ದೇಶಕ ಹಾಗೂ ಪತ್ರಕರ್ತ ರಾಮಚಂದ್ರ ಕಿಣಿ ಮಾತನಾಡಿ, ಕರಾಟೆ ಮಕ್ಕಳ ಶಾರೀರಿಕ-ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜನೆಯಿಂದ ಶೋಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ವೀರೇಂದ್ರ ಶ್ಯಾನಭಾಗ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಎಲ್ಲರ ಹೊಣೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ರಾಜ್ಯ ಮಟ್ಟದ ಕರಾಟೆ ಶಿಕ್ಷಕ ಸಂಘದ ಕಾರ್ಯದರ್ಶಿ ಸತೀಶ ಬೆಳ್ಮಣ, ತರಬೇತುದಾರರಾದ ಹನ್ಸಿ ರಾಜನ್, ರಾಜಶೇಖರ ಗೌಡ, ವಾಸು ಮೊಗೇರ, ಆರ್ಯನ ನಾಯ್ಕ ಉಪಸ್ಥಿತರಿದ್ದರು. ಕರಾಟೆ ಶಿಕ್ಷಕ ನಾಗರಾಜ ದೇವಾಡಿಗ ಸ್ವಾಗತಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ಪರ್ಧೆಯ ಯಶಸ್ಸಿಗೆ ತರಬೇತುದಾರರು, ಪಾಲಕರು ಮತ್ತು ಸ್ವಯಂಸೇವಕರು ಸಹಕರಿಸಿದರು.

More Stories
ಡ್ರಂಕ್ ಡ್ರೈವ್ ಪ್ರಕರಣ: ಭಟ್ಕಳ ಗ್ರಾಮೀಣ ಸಿಪಿಐ ಅಮಾನತು
ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ನಾಯ್ಕ ಅವಿರೋಧವಾಗಿ ಆಯ್ಕೆ
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ