December 23, 2025

ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನ.

ಕೆ.ಆರ್.ಪೇಟೆ; ಮಕ್ಕಳ ಸಮಗ್ರವಾದ ವ್ಯಕ್ತಿತ್ವದ ವಿಕಸನ ಹಾಗೂ ಜ್ಞಾನದ ವೃದ್ಧಿಗೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದ್ದು ವರದಾನ ವಾಗಿದೆ ಎಂದು ಆಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ ಹೇಳಿದರು. ಅವರು ಇಂದು ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಕ್ಲಸ್ಟರ್ ವ್ಯಾಪ್ತಿಯ ಮೂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಗಣಿತ ವಿಜ್ಞಾನಿ ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ವ್ಯಕ್ತಿತ್ವವು ಸಮಗ್ರವಾಗಿ ವಿಕಸನವಾಗಲು ಗಣಿತ ಹಾಗೂ ವಿಜ್ಞಾನದ ಶಿಕ್ಷಣದ ಕಲಿಕೆಯು ಇಂದು ಅಗತ್ಯವಾಗಿ ಬೇಕಾಗಿದೆ. ಆಂಗ್ಲ ಭಾಷೆ ಮತ್ತು ಕಂಪ್ಯೂಟರ್ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಗಣಿತ ಹಾಗೂ ವಿಜ್ಞಾನ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ತಾಂತ್ರಿಕ ಇಲ್ಲವೇ ವೈದ್ಯಕೀಯ ಶಿಕ್ಷಣವನ್ನು ಕಲಿಯಲು ಸಹಕಾರಿಯಾಗಲಿದೆ ಕಲಿಕೆಗೆ ಸ್ವಲ್ಪ ಕಷ್ಟವೆನಿಸಿದರು ಏಕಾಗ್ರತೆಯಿಂದ ಮನಸ್ಸನ್ನು ಕೇಂದ್ರೀಕರಿಸಿ ಅಭ್ಯಾಸ ಮಾಡಿದರೆ ಸಾಕು, ಗಣಿತ ಹಾಗೂ ವಿಜ್ಞಾನದ ಕಲಿಕೆಯು ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ ಎಂದು ತಿಳಿಸಿದ ನಾಗರತ್ನ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮೂಡಲು ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿಮಾರ್ಗವಾಗಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಗಣಿತ ಹಾಗೂ ವಿಜ್ಞಾನವನ್ನು ಕಲಿಯಲು ತಮ್ಮನ್ನು ಸಮರ್ಪಣೆ ಮಾಡಿಕೊಂಡು ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಅವರಲ್ಲಿಯೂ ಕೂಡ ವಿಶೇಷವಾಗಿ ಸಾಧನೆ ಮಾಡುವ ಸಾಮರ್ಥ್ಯವಿದೆ. ಇಂದಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರದರ್ಶನ ಮಾಡಿರುವ ವಿಜ್ಞಾನ ಮಾದರಿಗಳು ಅದ್ಭುತವಾಗಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗಣಿತ ಹಾಗೂ ವಿಜ್ಞಾನ ಕಲಿಕೆಯ ಬಗ್ಗೆ ತೋರಿಸುತ್ತಿರುವ ಆಸಕ್ತಿಯು ಮಾದರಿಯಾಗಿದೆ ವಿದ್ಯಾರ್ಥಿಗಳು ಇದೇ ರೀತಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಧಾನ ಮಂತ್ರಿ ಪೋಶಣ್ ಅಭಿಯಾನದ ತಾಲೂಕು ಸಹಾಯಕ ನಿರ್ದೇಶಕ ಯತೀಶ್, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ. ಮಂಜುನಾಥ್, ಮಂದಗೆರೆ ಕ್ಲಸ್ಟರ್ ವ್ಯಾಪ್ತಿಯ ಸಮೂಹ ಸಂಪನ್ಮೂಲ ಅಧಿಕಾರಿ ವೇಣುಗೋಪಾಲ್, ಬಿ.ಆರ್.ಪಿ ಉದೇಶಗೌಡ, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಕೆ. ದೇವರಾಜು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರೇವಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ವೀರಭದ್ರಯ್ಯ, ಮೂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!