
ಭಟ್ಕಳ: ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಭಟ್ಕಳ ಉಪವಿಭಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ಮೂರ್ತಿಗಳ ತಯಾರಿ ಹಾಗೂ ಬಳಕೆಗೆ ಸಂಪೂರ್ಣ ನಿಷೇಧ ಜಾರಿಯಾಗಿದೆ. ಉಪವಿಭಾಗದ ಸಹಾಯಕ ಆಯುಕ್ತೆ ಕುಮಾರಿ ಕಾವ್ಯರಾಣಿ ಕೆ. ಪಟ್ಟಣದ ಆಡಳಿತಸೌಧದಲ್ಲಿ ಸೋಮವಾರ ನಡೆದ ಸಾರ್ವಜನಿಕ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ಜೇಡಿಮಣ್ಣು ಮತ್ತು ಸಹಜ ಬಣ್ಣಗಳಿಂದ ಮಾತ್ರ ಮೂರ್ತಿಗಳನ್ನು ತಯಾರಿಸಬೇಕು. ಪಿಓಪಿ ಮೂರ್ತಿಗಳು ನೀರಿನಲ್ಲಿ ಕರಗದೆ ತ್ಯಾಜ್ಯವಾಗಿ ಉಳಿದು ಜಲಮೂಲಗಳನ್ನು ಮಾಲಿನ್ಯಗೊಳಿಸುತ್ತವೆ. ಆದ್ದರಿಂದ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ 120 ಕಡೆಗಳಲ್ಲಿ ಗಣೇಶೋತ್ಸವ ನಡೆಯಲಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಸಮಿತಿಗಳು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಪ್ರತಿಷ್ಠಾಪನೆ-ವಿಸರ್ಜನೆ ದಿನಾಂಕಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಸ್ಥಳ ಬದಲಾವಣೆ ಸಾಧ್ಯವಿಲ್ಲ. ಅಗ್ನಿಶಾಮಕ, ಹೆಸ್ಕಾಂ, ಪೊಲೀಸ್ ಇಲಾಖೆಗಳ ಅನುಮತಿ ಕಡ್ಡಾಯ. ಗ್ರಾಮಾಂತರದಲ್ಲಿ ಗ್ರಾಮಪಂಚಾಯತ್ ಹಾಗೂ ನಗರ ಪ್ರದೇಶದಲ್ಲಿ ಪುರಸಭೆ ಅಥವಾ ಪಟ್ಟಣ ಪಂಚಾಯತ್ ಮೂಲಕ ಏಕಗವಾಕ್ಷಿ ವ್ಯವಸ್ಥೆ ಜಾರಿಯಲ್ಲಿದೆ ಎಂದರು.
ಡಿ.ವೈ.ಎಸ್.ಪಿ ಮಹೇಶ್ ಕೆ. ಮಾತನಾಡಿ, ಪೆಂಡಾಲ್‌ಗಳನ್ನು ಸಂಚಾರಕ್ಕೆ ಅಡ್ಡಿಯಾಗದಂತೆ ನಿರ್ಮಿಸಲು ಸೂಚಿಸಿದರು. ಪೆಂಡಾಲ್ ಎದುರಿಗೆ ಸಮಿತಿಯ ಅಧ್ಯಕ್ಷರ ಹೆಸರು ಮತ್ತು ಸಹಾಯವಾಣಿ ಸಂಖ್ಯೆಯ ಫಲಕ ಕಡ್ಡಾಯ. ಬೆಂಕಿ ಅವಘಡಕ್ಕೆ ತುರ್ತು ಸಿದ್ಧತೆ ಇರಬೇಕು. ಗುಣಮಟ್ಟದ ವಿದ್ಯುತ್ ಪರಿಕರ ಬಳಕೆ ಅಗತ್ಯ. ಪ್ರಚೋದನಕಾರಿ ಭಾಷಣ ಹಾಗೂ ಗಾಳಿಸುದ್ದಿ ಹರಡುವುದನ್ನು ತಡೆಯಬೇಕು ಎಂದು ಹೇಳಿದರು.
ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಸಂಘದ ಐದು ದಿನಗಳ ಗಣೇಶೋತ್ಸವ ವಿಸರ್ಜನೆ ದಿನ ಮೆರವಣಿಗೆಗೆ ಅನುಕೂಲವಾಗುವಂತೆ ರಸ್ತೆ ಬದಿ ವಾಹನ ತೆರವುಗೊಳಿಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಸ್ವಾಗತಿಸಿದರು ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ, ನಗರ ಠಾಣೆ ಸಿಪಿಐ ದಿವಾಕರ, ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ,ಪಿಎಸೈ ತಿಮ್ಮಪ್ಪ ಮೊಗೇರ, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ನಾಯ್ಕ, ಶ್ರೀಧರ ನಾಯ್ಕ,ಕೃಷ್ಣ ನಾಯ್ಕ, ಸಂಜಯ ಗುಡಿಗಾರ ಮತ್ತಿತರರು ಇದ್ದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ