August 30, 2025

ಬಾಸಗೋಡದ ಶಾಲಾ _ ಸಾರ್ವಜನಿಕ ಗಣಪತಿಗೆ ದಶಕದ ಸಂಭ್ರಮ!

ಅಂಕೋಲಾ : ಶಹರದ ಸನಿಹದ ಬಾಸಗೋಡದ ಶತಮಾನ ಕಂಡ ಶಾಸಕರ ಸರ್ಕಾರಿ ಮಾದರಿ ಶಾಲೆಯ ಆವರಣದಲ್ಲಿನ ಆರ್ ಎನ್ ಶೆಟ್ಟಿ ಸಮುದಾಯ ಭವನದಲ್ಲಿ ಆರಂಭಗೊAಡ ಶಾಲಾ ಸಾರ್ವಜನಿಕ ಗಣೇಶೋತ್ಸವಕ್ಕೆ ದಶಕದ ಸಂಭ್ರಮ. ಪ್ರಾರಂಭದ ವರ್ಷಗಳಲ್ಲಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಯೋಜಿಸಲಾಗುತ್ತಿದ್ದ ಗಣೇಶೋತ್ಸವವನ್ನು, ನಂತರದಲ್ಲಿ ಪರಿಸರ ಸ್ನೇಹಿಯಾಗಿ ಪಂಚಲೋಹದ ಸ್ಥಿರ ಗಣಪತಿಯನ್ನಿಲ್ಲಿ ಆರಾಧಿಸುತ್ತಾ ನವ ಬಾಷ್ಯವನ್ನು ಬರೆಯಲಾಗಿದೆ.

ದಿನಾಂಕ 27. 08.2025 ರ ಭಾದ್ರಪದ ಶುದ್ಧ ಚತುರ್ಥಿಯ ಪರ್ವಕಾಲದಂದು ಮುಂಜಾನೆ 10:00 ಗಂಟೆಗೆ ಪಟ್ಟಣದ ಶ್ರೀರಾಮ್ ಸ್ಟಡಿ ಸರ್ಕಲ್ ನಲ್ಲಿ ನಿತ್ಯ ಪೂಜೆಗೊಳ್ಳುತ್ತಿದ್ದ ಗಣೇಶ ಮೂರ್ತಿಯನ್ನು ಗೌರವಯುತವಾಗಿ ಬಾಸಗೋಡದ ಶಾಲೆಗೆ ಬರಮಾಡಿಸಿಕೊಂಡು, ಪ್ರತಿಷ್ಠಾಪನೆಯೊಂದಿಗೆ ಗಣ ಹವನ ಸಹಿತ ವೈದಿಕರಿಂದ ಪೂಜೆಯನ್ನು ನೆರವೇರಿಸಿ, ಮಧ್ಯಾಹ್ನ 2 : 00 ಗಂಟೆಗೆ ಮಹಾಪ್ರಸಾದವನ್ನು ವಿತರಿಸಲಾಗುವುದು. ರಾತ್ರಿ 7:30ಕ್ಕೆ ನಿತ್ಯ ಪೂಜೆಯು ನಡೆಯಲಿದೆ.

ಮರುದಿನ ಬೆಳಿಗ್ಗೆ 10:00 ಗಂಟೆಗೆ ಶ್ರೀ ಸತ್ಯನಾರಾಯಣ ವೃತದೊಂದಿಗೆ, ಮಧ್ಯಾಹ್ನ 2:00 ಗಂಟೆಗೆ ಮಹಾಪೂಜೆ ಸಹಿತ ವಿಶೇಷ ಪ್ರಸಾದ ವ್ಯವಸ್ಥೆಯನ್ನೇರ್ಪಡಿಸಲಾಗಿದೆ. ತರುವಾಯ ಲಘು ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದ್ದು, ಇಳಿ ಹೊತ್ತು 5:00 ಗಂಟೆಗೆ ರಂಗಪೂಜೆ, ಪ್ರಸಾದ ವಿತರಣೆ, ಸವಾಲು ಹಾಗೂ ವಿಸರ್ಜನ ಪೂಜೆಯ ನಂತರದಲ್ಲಿ, ಸರಳ ಮೆರವಣಿಗೆಯ ಮೂಲಕ ಸನಿಹದ ನದಿಯಲ್ಲಿ ಗಣೇಶ ವಿಗ್ರಹವನ್ನು ವಿಸರ್ಜಿಸಿ, ಗೌರವಯುತವಾಗಿ ಶ್ರೀರಾಮ್ ಸ್ಟಡಿ ಸರ್ಕಲ್ ಗೆ ತಲುಪಿಸಲಾಗುವುದು. ಈ ವರ್ಷದ ಮೂರ್ತಿ ಗೌರವದ ಪ್ರಾಯೋಜಕತ್ವವನ್ನು ಗೋಕರ್ಣದ ಶ್ರೀ ಭದ್ರಕಾಳಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಯುತ ಎಸ್. ಸಿ. ನಾಯ್ಕರವರು ವಹಿಸಿಕೊಂಡಿದ್ದು, ಸಮಿತಿಯ ಗೌರವಾಧ್ಯಕ್ಷರಾದ ” ನೆಲ ಮುಗಿಲು ” ಅಭಿನಂದನದ ಲಾ. ಗಣಪತಿ ನಾಯಕ ಶೀಳ್ಯರವರು ಸ್ಥಿರ ಮಂಟಪವನ್ನು ಕೊಡುಗೆಯಾಗಿ ನೀಡಿದ್ದು, ವಿಶೇಷ ಪ್ರಸಾದ ವ್ಯವಸ್ಥೆಯನ್ನು ಅಂಕೋಲಾದ ನವ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀರಾಮ್ ಸ್ಟಡಿ ಸರ್ಕಲ್ ಇಂದ ನಿರ್ದೇಶಕರಾದ ಸೂರಜ್ ಅರವಿಂದರವರು ಮತ್ತು ನೈವೇದ್ಯದ ಸೇವೆಗೆ ಸಮಿತಿಯ ಅಧ್ಯಕ್ಷರಾದ ಯೋಗಗುರು ಉದಯ ಬಾಸಗೋಡರವರು ಸೌಜನ್ಯವನ್ನು ಒದಗಿಸಿರುತ್ತಾರೆ.

ಎರಡು ದಿನಗಳವರೆಗೆ ನಡೆಯಲಿರುವ ಈ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಆಸ್ತಿಕ ಮಹನೀಯರು ಬಹುಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಅಧ್ಯಕ್ಷರಾದ ಉದಯ ಬಾಸಗೋಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಆಯು ಆಗೇರರವರು ಕೋರಿರುತ್ತಾರೆ.

About The Author