September 11, 2025

ನೀರಿಲ್ಲದೆ ನಲುಗಿದ ಬೆಂಗ್ರೆ ಉಳ್ಳಣ್, ಶಶಿಹಿತ್ತು ಭಾಗದ ಜನರು: ಪಂಚಾಯತ್ ಗೆ ಗ್ರಾಮಸ್ಥರ ಮುತ್ತಿಗೆ

ಭಟ್ಕಳ: ಇಲ್ಲಿನ ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಳಣ್, ಶಶಿಹಿತ್ತು ಭಾಗದ ಜನರಿಗೆ ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೋಮವಾರ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು. ಮಾವಿನತೋಳು ಪ್ರದೇಶದ ಮಾಲ್ಕಿ ಜಮೀನಿನಲ್ಲಿ 1996ರಲ್ಲಿ ಸರ್ಕಾರದ ಅನುದಾನದಿಂದ ಬಾವಿ ನಿರ್ಮಿಸಿ ಕೊಳವೆ ಆಳವಡಿಸಲಾಗಿತ್ತು. ಅದಾದ ಬಳಿಕ ಸುಮಾರು 150 ಮನೆಗಳಿಗೆ ದಿನನಿತ್ಯ ಕುಡಿಯುವ ನೀರು ಇದೇ ಬಾವಿಯಿಂದ ಪೂರೈಕೆಯಾಗುತ್ತಿತ್ತು. ಆದರೆ ಇತ್ತೀಚೆಗೆ ನಿವೇಶನದ ಮಾಲಿಕರು ನೀರಿನ ಹರಿವು ತಡೆಯಲು ಮುಂದಾಗಿರುವುದರಿAದ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರದ ಅನುದಾನದಿಂದ ನಿರ್ಮಿಸಿದ ಬಾವಿಯಿಂದ ಜನರಿಗೆ ನೀರು ನೀಡುವುದನ್ನು ತಡೆಯಲು ಯಾರಿಗೂ ಹಕ್ಕಿಲ್ಲ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಬಂದ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಡಿ. ಕೊಸ್ತಾ, ಉಪಾಧ್ಯಕ್ಷ ಗೋವಿಂದ ನಾಯ್ಕ, ಪಿಡಿಓ ಉದಯ ಬೋರ್ಕರ್, ಸದಸ್ಯರಾದ ಮೇಘನಾ ಕಾಮತ್, ಶಿವರಾಮ ದೇವಾಡಿಗ ಸಮಸ್ಯೆ ಬಗೆಹರಿಸಲು ಪಂಚಾಯತ್ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆದರೆ ಇದಕ್ಕೆ ತೃಪ್ತರಲ್ಲದ ಗ್ರಾಮಸ್ಥರು ಬಾವಿ ಇರುವ ಸ್ಥಳಕ್ಕೆ ತೆರಳಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ನಂತರ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಸ್ಥಳಕ್ಕೆ ಬಂದು ಮಾಲ್ಕಿದಾರರೊಂದಿಗೆ ಮಾತುಕತೆ ನಡೆಸಿ, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಜನರು ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳುವವರೆಗೂ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ವಿಷ್ಣು ದೇವಾಡಿಗ, ದಾಸ ದೇವಾಡಿಗ, ಯಶ್ವಂತ ದೇವಾಡಿಗ, ಮೋಹನ ದೇವಾಡಿಗ, ಭಾಸ್ಕರ ದೇವಾಡಿಗ, ರಾಜೇಶ್ವರಿ ದೇವಾಡಿಗ, ಮುಕ್ತಾ ದೇವಾಡಿಗ, ಸಾವಿತ್ರಿ ದೇವಾಡಿಗ, ಲಕ್ಷ್ಮೀ ದೇವಾಡಿಗ ಸೇರಿ ಹಲವರು ಭಾಗವಹಿಸಿದ್ದರು.

About The Author

error: Content is protected !!