November 18, 2025

ಧಾರವಾಡದ ಶೇಷತಾರ ಸ್ಕಾಲರ್ ಶಿಪ್‌ಗೆ ಬರ್ಗಿ ಪ್ರೌಢಶಾಲೆಯ ನಾಗಶ್ರೀ – ನಾಗಲಕ್ಷ್ಮಿ,

ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಭ್ಯಸಿಸಿ ೨೦೨೪-೨೫ ರ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತ್ಯುನ್ನತವಾದ ಅಂಕಗಳನ್ನು ಪಡೆದ ನಾಗಶ್ರೀ ನಾಗೇಶ ಹರಿಕಂತ್ರ ಹಾಗೂ ಎನ್. ನಾಗಲಕ್ಷ್ಮಿಯವರು ಧಾರವಾಡದ “ಶೇಷತಾರಾ” ಪ್ರತಿಷ್ಠಾನದ ಶಿಷ್ಯವೇತನಕ್ಕೆ ಭಾಜನರಾಗಿದ್ದಾರೆ.

ಬಂಕಿಕೋಡ್ಲದ ಸನಿಹದ ಹನೇಹಳ್ಳಿಯಲ್ಲಿನ ಶ್ರೀ ಮುರ್ಕುಂಡೇಶ್ವರ ದೇವಾಲಯದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರೇಣುಕಾ ಕುಚಿನಾಡ್ ರವರು ಶಿಷ್ಯವೇತನವನ್ನು ಪ್ರದಾನಗೊಳಿಸಿದರು. ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ೪೫ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ರೂ. ೫,೦೦೦ -/- ದಂತೆ ರೂ. ೨,೨೫,೦೦೦ -/-ಗಳನ್ನು ಶೇಷತಾರಾ ಪ್ರತಿಷ್ಠಾನದಿಂದ ವಿತರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾದ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಕರ್ನಾಟಕ ಸಂಸ್ಕೃತ ಪರಿಷತ್ ಮತ್ತು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ಮಾತನ್ನಾಡಿ, ನೂರು ರೂಪಾಯಿಯನ್ನು ವ್ಯಯಿಸದೆ ಸಾವಿರ – ಲಕ್ಷ ರೂಪಾಯಿಗಳ ಅಗ್ಗದ ಪ್ರಚಾರವನ್ನು ಪಡೆಯುವವರಿರುವ ಬರ್ಬರ ವ್ಯವಸ್ಥೆಯಲ್ಲಿ, ಡಾ.ರೇಣುಕಾ ಕುಚಿನಾಡರವರು ತನ್ನ ತಾಯ್ತಂದೆಯರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಹುಟ್ಟು ಹಾಕಿ, ಅವರಿವರಲ್ಲಿ ಬೇಡಾಡದೇ, ತನ್ನದೇ ದುಡಿಮೆಯ ಬಹುಪಾಲು ಸಂಪಾದನೆಯನ್ನು ಯಾವುದೇ ಪ್ರಚಾರ ಮತ್ತು ಪ್ರದರ್ಶನಗಳಿಲ್ಲದೇ, ಬಡ – ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಯೋಗಿಸುವ ಅಪರೂಪದ ಸಜ್ಜನಿಕೆಯ ವ್ಯಕ್ತಿತ್ವದಿಂದ “ಅಭಿನವ ಅತ್ತಿಮಬ್ಬೆ”ಯಾಗಿದ್ದಾರೆ ಎಂದರು. ಯಲ್ಲಾಪುರದ ಭರತನಹಳ್ಳಿ ಪಂಚಾಯತ್ ದ ಉಪಾಧ್ಯಕ್ಷರಾದ ಗಣೇಶ್ ಭಟ್ ರವರು ಡಾ. ರೇಣುಕಾ ಕುಚಿನಾಡರವರ ಹೆತ್ತವರಲ್ಲಿನ ಶ್ರದ್ಧೆ ಮತ್ತು ಬಡ – ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಕಳಕಳಿಯ ಕುರಿತಂತೆ ಶ್ಲಾಘಿಸಿ, ಫಲಾನುಭವಿ ವಿದ್ಯಾರ್ಥಿಗಳಿಗೆ ರಾಷ್ಟ್ರಾಭಿಮಾನವನ್ನು ಮೈಗೂಡಿಸಿಕೊಂಡು ಸಂಸ್ಕಾರವAತರಾಗಿ ಬದುಕನ್ನು ಕಟ್ಟಿಕೊಳ್ಳಲು ಕರೆ ನೀಡಿದರು.

ಶೇಷಕಾರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗಿರುವ ಸುಭಾಷ್ ಜಾಧವ್ ರವರು ಸ್ವಾಗತಿಸಿ – ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತಮ್ಮ ತಂದೆ ಕೀರ್ತಿಶೇಷ ಶೇಷಗಿರಿ ಕುಚಿನಾಡ ಹಾಗೂ ತಾಯಿ ತಾರಾದೇವಿಯವರ ಸಂಸ್ಮರಣೆಯಲ್ಲಿ ಶೇಷತಾರ ಪ್ರತಿಷ್ಠಾನವನ್ನು ಹುಟ್ಟುಗೊಳಿಸಿ, ಕಳೆದ ಹತ್ತು ವರ್ಷಗಳಿಂದ ಜಾತಿ, ಮತ, ಪಂಥಗಳನ್ನೆಣಿಸದೆ, ಬಡ – ಪ್ರತಿಭಾನ್ವಿತ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗಾಗಿ ಕನಿಷ್ಠ ರೂ. ೫೦೦೦ -/-ದಂತೆ ಯಾವುದೇ ಪ್ರಚಾರ – ಪ್ರತಿಫಲವನ್ನು ಬಯಸದೇ, ನಿಷ್ಕಾಮ ಮನೋಭಾವದಿಂದ ಇದುವರೆಗೆ ಕೋಟ್ಯಂತರ ರೂಪಾಯಿಗಳನ್ನು ಶಿಷ್ಯವೇತನವನ್ನಾಗಿ ನೀಡುತ್ತಲೇ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹನೇಹಳ್ಳಿ ಮೂಲದ ಧಾರವಾಡದಲ್ಲಿ ನೆಲೆಗೊಂಡ ಡಾ. ರೇಣುಕಾ ಕುಚಿನಾಡರವರ ಉದಾರತೆಯನ್ನು ಎದೆದುಂಬಿ ಬಣ್ಣಿಸಿದರು.

ಬಂಕಿಕೊಡ್ಲದ ಆನಂದಾಶ್ರಮ ಪ್ರೌಢ ಶಾಲೆಯ ಜನಪ್ರಿಯ ಮುಖ್ಯಾಧ್ಯಾಪಕರಾದ ಗಂಗಾಧರ್ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಭರತನಹಳ್ಳಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ವಿನಾಯಕ ಹೆಗಡೆಯವರು ವಂದಿಸಿದರು. ಹಿರಿಯರಾದ ನಾಡಕರ್ಣಿ ಮತ್ತು ಬರ್ಗಿಯೂರಿನ ಮುಖಂಡರಾದ ನಾರಾಯಣ ನಾಗು ನಾಯಕರವರು ಉಪಸ್ಥಿತರಿದ್ದರು.
ವಿಶೇಷವಾದ ಉಟೋಪಚಾರದ ವ್ಯವಸ್ಥೆಯು ಗಮನವನ್ನು ಸೆಳೆಯಿತು.

About The Author

error: Content is protected !!