November 18, 2025

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸಾರ್ವಜನಿಕರ ಸಹಕಾರ ಅನಿವಾರ್ಯ, ಎನ್.ಎಚ್.ಎ ಅಧಿಕಾರಿಗಳ ಮನವಿ

ಭಟ್ಕಳ: ತಾಲ್ಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದಕ್ಕಾಗಿ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಶಿವಕುಮಾರ ಒತ್ತಾಯಿಸಿದರು.

ಭಟ್ಕಳ ನಾಗರಿಕ ಹೋರಾಟ ಸಮಿತಿಯ ಸದಸ್ಯರೊಂದಿಗೆ ಮಾತನಾಡಿದ ಅವರು, ಸ್ಥಳೀಯರು ಉನ್ನತ ಮಟ್ಟದ ಮೂಲಸೌಕರ್ಯ ಪಡೆಯಲು ಮುಂದಿನ ಹಂತದಲ್ಲಿ ಎಲ್ಲ ಬೇಡಿಕೆಗಳನ್ನು ಆದ್ಯತೆಯಾಗಿಯೇ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ ಮಾತನಾಡಿ, ಪುರಸಭೆಯವರು ಹಿಂದಿನಿAದ ತೆಗೆದ ಬೀದಿದೀಪಗಳನ್ನು ಮೂರು ವರ್ಷಗಳಾದರೂ ಐ.ಆರ್.ಬಿ ಸಂಸ್ಥೆ ಮರು ಅಳವಡಿಸಿಲ್ಲ ಎಂಬ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೀಪಗಳ ಕೊರತೆಯಿಂದ ಪ್ರತಿದಿನವೂ ಅಪಘಾತಗಳು ಸಂಭವಿಸುತ್ತಿವೆ. ಇದರ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾಧಿಕಾರಿ ಶಿವಕುಮಾರ, ಐ.ಆರ್.ಬಿಗೆ ತಾತ್ಕಾಲಿಕ ವಿದ್ಯುತ್ ದೀಪಗಳನ್ನು ತಕ್ಷಣ ಅಳವಡಿಸುವಂತೆ ನಿರ್ದೇಶನ ನೀಡಲಾಗುವುದಾಗಿ ತಿಳಿಸಿದರು. ಅದರೊಂದಿಗೆ, ಮಳೆಗಾಲದಲ್ಲಿ ಪಟ್ಟಣದ ಮಳೆ ನೀರು ಹೆದ್ದಾರಿಯಲ್ಲಿ ನಿಲ್ಲದಂತೆ ಮತ್ತು ನಿರ್ವಿಘ್ನವಾಗಿ ನದಿಗೆ ಹರಿಯುವಂತೆ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು. ಅಗತ್ಯ ಇರುವ ಸ್ಥಳಗಳಲ್ಲಿ ಸರ್ವಿಸ್ ರಸ್ತೆ ಹಾಗೂ ಬೀದಿದೀಪಗಳ ಅಳವಡಿಕೆಗೂ ಸೂಚನೆಗಳನ್ನು ನೀಡಿರುವುದಾಗಿ ಹೇಳಿದರು.

ನಂತರ ಪುರಸಭೆಯ ಅಧಿಕಾರಿಗಳು ಮತ್ತು ಐ.ಆರ್.ಬಿ ಪ್ರತಿನಿಧಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಯೋಜನಾಧಿಕಾರಿ ಶಿವಕುಮಾರ, ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಗತ್ಯ ಕಾಮಗಾರಿಗಳನ್ನಾಗಲಿ ಆದ್ಯತೆಯಿಂದ ಕೈಗೊಳ್ಳುವಂತೆ ಸೂಚಿಸಿದರು.

ಪರಿಶೀಲನೆ ವೇಳೆಯಲ್ಲಿ ಪುರಸಭೆ ಅಧ್ಯಕ್ಷ ಅಲ್ತಾಫ ಖರೂರಿ, ಜಾಲಿ ಪಂ.ಪA ಉಪಾಧ್ಯಕ್ಷ ಇಮ್ರಾನ ಲಂಕಾ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಇಂಜಿನಿಯರ್‌ಗಳಾದ ಅರವಿಂದ ರಾವ್, ವಿಶ್ವನಾಥ ಅಂಗಡಿ, ಸುದೇಶ ಶೇಟ್ಟಿ, ನಾಗರಾಜ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!