ದರ್ಶನ್ ಅಭಿನಯದ ‘ಡೆವಿಲ್’ ಚಲನಚಿತ್ರವನ್ನು ವೀಕ್ಷಿಸಿ ಬರುವಾಗ ಕಾರು ಅಪಘಾತ
ಮುಂಡಗೋಡ: ದರ್ಶನ್ ಅಭಿನಯದ ‘ಡೆವಿಲ್’ ಚಲನಚಿತ್ರವನ್ನು ವೀಕ್ಷಿಸಿ ಹುಬ್ಬಳ್ಳಿಯಿಂದ ಮುಂಡಗೋಡಿಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಂಡಗೋಡ ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಎಂ. (38) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯು ತಡರಾತ್ರಿ, ತಡಸ ಸಮೀಪದ ತಾಯವ್ವ ದೇವಸ್ಥಾನದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಗೋಪಾಲ್ ಎಂ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಮುಂಡಗೋಡ ತಹಶೀಲ್ದಾರ್ ಕಚೇರಿಯ ಇಬ್ಬರು ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸಿಬ್ಬಂದಿಗಳೊಂದಿಗೆ ಗೋಪಾಲ್ ಎಂ. ಅವರು ರಾತ್ರಿ ಹುಬ್ಬಳ್ಳಿಯಿಂದ ಮುಂಡಗೋಡಿಗೆ ಹಿಂತಿರುಗುತ್ತಿದ್ದರು. ತಾಯವ್ವ ದೇವಸ್ಥಾನದ ಬಳಿ ಅವರ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ಕಂದಕಕ್ಕೆ (ಹಳ್ಳಕ್ಕೆ) ಇಳಿದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಯಿಂದಾಗಿ ಗೋಪಾಲ್ ಎಂ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಡರಾತ್ರಿಯಾದರೂ ಗೋಪಾಲ್ ಎಂ. ಅವರು ಮನೆಗೆ ತಲುಪದಿರುವ ಕಾರಣ ಆತಂಕಗೊಂಡ ಅವರ ಕುಟುಂಬದ ಸದಸ್ಯರು ಮತ್ತು ಸಹೋದ್ಯೋಗಿಗಳು ಅವರನ್ನು ಹುಡುಕಲು ಪ್ರಾರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನವರಾದ ಗೋಪಾಲ್ ಎಂ. ಅವರು ಮುಂಡಗೋಡ ತಾಲ್ಲೂಕಿನಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮತ್ತು ಉತ್ತಮ ಜನ ಸಂಪರ್ಕದಿಂದಾಗಿ ಕಂದಾಯ ಇಲಾಖೆಯ ಅತ್ಯಂತ ಜನಪ್ರಿಯ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಈ ಮೊದಲು ಅವರು ಇಂದೂರ ಗ್ರಾಮ ಆಡಳಿತಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು.
ನಂತರ ಮುಂಡಗೋಡ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಆಗಿದ್ದರು.
ಅವರ ನಿಧನ ಸುದ್ದಿ ಕೇಳಿ ಮುಂಡಗೋಡ ತಾಲ್ಲೂಕಿನಾದ್ಯಂತ ಸಾರ್ವಜನಿಕರು ಮತ್ತು ಸಹೋದ್ಯೋಗಿಗಳಲ್ಲಿ ತೀವ್ರ ಶೋಕ ಆವರಿಸಿದೆ. ಅಪಘಾತದ ಕುರಿತು ಸ್ಥಳೀಯ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಹೆಚ್ಚಿನ ತನಿಖೆ ಮುಂದುವರೆದಿದೆ.

More Stories