ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಮೀಪದ ಖಾಜಿಯಾ ಕಂಪೌಂಡ್ ಮೈದಾನದಲ್ಲಿ ಡಿಸೆಂಬರ್ 25ರಿಂದ 28ರವರೆಗೆ ನಾಲ್ಕು ದಿನಗಳ ಕಾಲ ಭಟ್ಕಳ ಉತ್ಸವ ನಡೆಯಲಿದೆ ಎಂದು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ ಖಾರ್ವಿ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಕದ ತಾಲೂಕುಗಳಲ್ಲಿ ಇಂತಹ ಉತ್ಸವಗಳು ನಡೆಯುತ್ತಿದ್ದರೂ ಭಟ್ಕಳದಲ್ಲಿ ಸಮಗ್ರ ಉತ್ಸವದ ಕೊರತೆ ಇತ್ತು. ಆ ಹಿನ್ನೆಲೆಯಲ್ಲೇ ಸಮಾಜದ ಎಲ್ಲ ವರ್ಗಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಉತ್ಸವವು ಸಾಮರಸ್ಯ ಹಾಗೂ ಏಕತೆಯ ಸಂಕೇತವಾಗಿದ್ದು, ವಿವಿಧ ಸಮುದಾಯಗಳ ಮುಖಂಡರು, ಸರ್ಕಾರಿ ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಸಹಕಾರ ಉತ್ಸವಕ್ಕೆ ದೊರೆತಿದ್ದು, ಹಲವಾರು ಸಂಘ–ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಶ್ರೀಕಾಂತ ನಾಯ್ಕ ಮಾಹಿತಿ ನೀಡುತ್ತಾ, ಡಿಸೆಂಬರ್ 25ರಿಂದ ಆರಂಭಗೊಳ್ಳುವ ಉತ್ಸವದಲ್ಲಿ ಕೃಷಿ ಹಾಗೂ ಸಾವಯವ ತರಕಾರಿ ಮೇಳ, ಸೀರೆ ಮತ್ತು ವಿವಿಧ ಉಡುಪುಗಳ ಮೇಳ, ಸರ್ಕಾರಿ ಇಲಾಖೆಗಳ ಮಾಹಿತಿ ಕೇಂದ್ರಗಳು ಹಾಗೂ ವಿವಿಧ ಉದ್ಯಮಗಳ ಪ್ರದರ್ಶನಗಳು ನಡೆಯಲಿವೆ ಎಂದರು. ಇದರ ಜೊತೆಗೆ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ, ಆಹಾರ ಮೇಳ, ಮತ್ಸ್ಯ ಮೇಳ, ಸ್ವದೇಶಿ ವಸ್ತುಗಳ ಮಳಿಗೆಗಳು, ಐಸ್‌ಕ್ರೀಂ ಹಾಗೂ ಹಲಸಿನ ಮೇಳಗಳು ಸಾರ್ವಜನಿಕರ ಆಕರ್ಷಣೆಯಾಗಲಿವೆ. ಮಕ್ಕಳಿಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ವ್ಯವಸ್ಥೆಯೂ ಮಾಡಲಾಗಿದೆ ಎಂದು ಹೇಳಿದರು.
ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿಸೆಂಬರ್ 25ರಂದು ಸಂಜೆ 6.30ಕ್ಕೆ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ 7 ಗಂಟೆಯಿಂದ ಸ್ಥಳೀಯ ಕಲಾವಿದರ ತಂಡ ಝೆಂಕಾರ ಮೆಲೋಡೀಸ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಎರಡು ದಿನಗಳ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಸ್ಥಳೀಯ ತಂಡಗಳಿಗೆ ನೀಡಲಾಗಿದೆ. ರಾಜ್ಯಮಟ್ಟದ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಕಲಾವಿದರಿಂದ ಗಾಯನ, ನೃತ್ಯ ಹಾಗೂ ಸಂಗೀತ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು.
ಭಟ್ಕಳ ಉತ್ಸವ ಸಮಿತಿಯ ಗೌರವ ಸಲಹೆಗಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಉತ್ಸವ ಸಮಿತಿ ಗೌರವ ಸಲಹೆಗಾರರು ನಜೀರ್ ಕಾಶಿಂಜಿ, ಭಟ್ಕಳ ಉತ್ಸವ ಸಮಿತಿ ಮೇಳಗಳ ಸಂಯೋಜಕ ಶ್ರೀಧರ್ ಮರವಂತೆ, ಕ್ರಿಯಾಶೀಲ ಸಂಘದ ಗೌರವಾಧ್ಯಕ್ಷ ದೀಪಕ್ ನಾಯ್ಕ, ಮನಮೋಹನ್ ನಾಯ್ಕ, ಕ್ರಿಯಾಶೀಲ ಸಂಘದ ಕಾರ್ಯದರ್ಶಿ ಅರುಣ್
ನಾಯ್ಕ, ಪಾಂಡುರಂಗ ನಾಯ್ಕ, ದಿನೇಶ ನಾಯ್ಕ,ವೆಂಕಟೇಶ ಮೊಗೇರ, ವಿನಾಯಕ್ ನಾಯ್ಕ ,ಅಶೋಕ್ ನಾಯ್ಕ ಮತ್ತಿತರರು ಇದ್ದರು.

More Stories
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ
ಹಿಂದು ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್ ಯುವಕರು