December 23, 2025

ವಾರ್ಷಿಕ ದೀಪೋತ್ಸವ, ದೀಪಾರತಿ ಹಾಗೂ ಭಜನ ಸಂಧ್ಯಾ ಕಾರ್ಯಕ್ರಮ

ಹೊನ್ನಾವರ : ತಾಲೂಕಿನ ಖರ್ವಾದ ಶ್ರೀ ದುರ್ಗಾಂಬ ದೇವಸ್ಥಾನ ಹಾಗೂ ಶ್ರೀ ದುರ್ಗಾಂಬ ಧಾರ್ಮಿಕ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ದೀಪೋತ್ಸವ, ದೀಪಾರತಿ ಹಾಗೂ ಭಜನ ಸಂಧ್ಯಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿAದ ಜರುಗಿತು. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಪ್ರತಿಭೆಗಳನ್ನು ಗೌರವಿಸಲಾಯಿತು. ತರ್ಕಶಾಸ್ತ್ರ ಹಾಗೂ ಸಾಮವೇದದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ರಾಜೇಶ್ ಹೆಗಡೆ ಅರೇಬೈಲ್, ಅಂತರಾಷ್ಟ್ರೀಯ ಯೋಗ ಪಟುಗಳಾದ ಮಹೇಂದ್ರ ಗಣೇಶ್ ಗೌಡ ಹಾಗೂ ಮಾಣಿಕ್ಯ ಸುಬ್ರಾಯ ಗೌಡ, ರಾಷ್ಟ್ರಮಟ್ಟದ ಕರಾಟೆ ಪಟು ಹರ್ಷ ನಾಗರಾಜ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಚೈತ್ರ ಗೌಡ, ವೈಷ್ಣವಿ ಗೌಡ ಹಾಗೂ ಸಿಂಚನ ಭಂಡಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಅಲ್ಲದೆ, ಕಲೆ ಮತ್ತು ಧಾರ್ಮಿಕ ಸೇವೆಯನ್ನು ಗುರುತಿಸಿ ಯಕ್ಷಗಾನ ಭಾಗವತ ಸುಬ್ರಾಯ ಈಶ್ವರ ಹೆಗಡೆ ಕಪ್ಪೆಕೆರೆ, ವೇ|ಮೂ| ಗಜಾನನ ಮಹಾಬಲೇಶ್ವರ ಭಟ್ಟ ಹಾಗೂ ಗಜಾನನ ನಾರಾಯಣ ನಾಯಕ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶಿರಸಿಯ ಸ್ವರ್ಣವಲ್ಲಿ ಮಾತೃ ಮಂಡಳಿಯವರಿAದ ಭಜನೆ ಹಾಗೂ ವಿದ್ವಾನ್ ಶಿವಾನಂದ ಭಟ್ ಹಡಿನಬಾಳ ಅವರಿಂದ ಶಾಸ್ತ್ರೀಯ ಸಂಗೀತ ಜರುಗಿತು. ಭಾರತಿ ಆರ್. ಹೆಗಡೆ ಹಾಗೂ ಸರೋಜಾ ಎಸ್. ಭಟ್ ಅವರಿಂದ ಭಕ್ತಿ ಸಂಗೀತ ಸುಧೆ ಹರಿಯಿತು. ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡ ‘ಕಂಸ ವಧೆ’ ಯಕ್ಷಗಾನ ನೋಡುಗರ ಮನಸೆಳೆಯಿತು.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ

About The Author

error: Content is protected !!