5,000ಕ್ಕೂ ಹೆಚ್ಚು ಮಕ್ಕಳಿಗೆ ಸಮುದ್ರದ ಅಪಾಯಗಳ ಅರಿವು
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸುವ ವಿದ್ಯಾರ್ಥಿಗಳ ಸುರಕ್ಷತೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ.
ಇತ್ತೀಚಿನ ದಿನಗಳಲ್ಲಿ ಮುರುಡೇಶ್ವರ ಬೀಚ್ನಲ್ಲಿ ಸಮುದ್ರದ ಅಲೆಗಳ ಅಬ್ಬರ ಮತ್ತು ಒಳಹರಿವಿನ ಬಗ್ಗೆ ಅರಿವಿಲ್ಲದೆ ನೀರಿಗೆ ಇಳಿದು ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಘಟನೆಗಳು ನಡೆದ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಶಾಲಾ ಮಕ್ಕಳ ಗುಂಪುಗಳು ಬೀಚ್ಗೆ ಬಂದ ತಕ್ಷಣವೇ ಅವರನ್ನು ಭೇಟಿಯಾಗಿ ಸಮುದ್ರದ ಅಪಾಯಗಳ ಕುರಿತು ಸ್ಥಳದಲ್ಲೇ ಮಾಹಿತಿ ನೀಡಲಾಗುತ್ತಿದೆ.
ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ದಾವಣಗೆರೆ, ಶಿವಮೊಗ್ಗ, ಹಾವೇರಿ ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಶಾಲೆಗಳಿಂದ ಆಗಮಿಸಿದ ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಈ ಅಭಿಯಾನದ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಶಾಲಾ ಪ್ರವಾಸದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರವಾಸಿಗರ ಜೀವ ರಕ್ಷಣೆಯ ದೃಷ್ಟಿಯಿಂದ ಬೀಚ್ನಲ್ಲಿ ಈಜುವುದನ್ನು ಆದಷ್ಟು ತಪ್ಪಿಸಬೇಕು, ‘ಈಜಲು ನಿಷೇಧ’ ಫಲಕವಿರುವ ಕಡೆ ನೀರಿಗೆ ಇಳಿಯಬಾರದು, ಮದ್ಯಪಾನ ಮಾಡಿ ಸಮುದ್ರಕ್ಕೆ ಇಳಿಯುವುದು ಸಂಪೂರ್ಣ ನಿಷೇಧ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಲೆಗಳ ಬಳಿ ಸೆಲ್ಫಿ ಅಥವಾ ರೀಲ್ಸ್ ಮಾಡುವುದರಿಂದ ದೂರವಿರಬೇಕು, ಮಕ್ಕಳನ್ನು ಒಂಟಿಯಾಗಿ ಬಿಡಬಾರದು ಹಾಗೂ ಲೈಫ್ಗಾರ್ಡ್–ಪೊಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣವೇ 112 ಸಹಾಯವಾಣಿ ಅಥವಾ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

More Stories
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ
ಹಿಂದು ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್ ಯುವಕರು