March 2, 2026

ಭೂಮಿ ತಾಯಿಯನ್ನು ನಂಬಿ ಬೇಸಾಯ ಮಾಡಿದವರು ಎಂದಿಗೂ ಮೋಸ ಹೋಗಿಲ್ಲ. ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ

ಹಸಿದ ಹೊಟ್ಟೆಗೆ ಅನ್ನ ನೀಡುತ್ತಿರುವ ರೈತನ ಬೇಸಾಯ ವೃತ್ತಿಯು ಅತ್ಯಂತ ಶ್ರೇಷ್ಠ ಕಸುಬಾಗಿದೆ. ಭೂಮಿ ತಾಯಿಯನ್ನು ನಂಬಿ ಬೇಸಾಯ ಮಾಡಿದವರು ಎಂದಿಗೂ ಮೋಸ ಹೋಗಿಲ್ಲ. ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ..

ಹಸಿದ ಹೊಟ್ಟೆಗೆ ತನ್ನ ಶ್ರಮದ ದುಡಿಮೆಯ ಮೂಲಕ ಅನ್ನವನ್ನು ಬೆಳೆದು ನೀಡುತ್ತಿರುವ ರೈತನ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ಅವರು ಇಂದು ಕೃಷ್ಣರಾಜಪೇಟೆ ತಾಲೂಕಿನ ಕಸಬಾ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಪ್ರಗತಿ ಪರ ರೈತರಾದ ಎಲ್.ಆರ್.ಕುಮಾರಸ್ವಾಮಿ ಅವರ ಕೆಪಿಜೆ ಫಾರಂನಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಮೈಸೂರಿನ ಆಕಾಶವಾಣಿಯ ಸಹಯೋಗದಲ್ಲಿ ಆಯೋಜಿಸಿದ್ದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಇಳುವರಿಯ ಆಸೆಗಾಗಿ ರೈತರು ತಮ್ಮ ಜಮೀನಿಗೆ ಅತಿಯಾಗಿ ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸಿ ಬೇಸಾಯ ಮಾಡುತ್ತಿರು ವುದರಿಂದ ಭೂಮಿಯ ಫಲವತ್ತತೆಯು ನಾಶವಾಗಿ ಭೂಮಿ ಬಂಜರಾಗುತ್ತಿದೆ. ಆದ್ದರಿಂದ ರೈತ ಬಾಂಧವರು ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸದೆ ನೈಸರ್ಗಿಕವಾಗಿ, ಸಾವಯವ ಪದ್ಧತಿಯಲ್ಲಿ ವೈಜ್ಞಾನಿಕವಾಗಿ ಬೇಸಾಯ ಮಾಡಿ ಹೆಚ್ಚಿನ ಇಳುವರಿ ಪಡೆಯುವ ಜೊತೆಗೆ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಸ್ವಾಮೀಜಿ , ಹಸಿದ ಹೊಟ್ಟೆಗೆ ತಮ್ಮ ಶ್ರಮದ ದುಡಿಮೆಯ ಮೂಲಕ ಬೇಸಾಯ ಮಾಡಿ ಅನ್ನವನ್ನು ನೀಡುತ್ತಿರುವ ರೈತನ ವೃತ್ತಿಯು ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ ರೈತ ಬಾಂಧವರು ಬೇಸಾಯದಲ್ಲಿ ನಷ್ಟ ಹೊಂದಿ ಕೃಷಿ ಚಟುವಟಿಕೆಗಳಿಂದ ದೂರ ಹೋಗುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ರೈತ ಬಾಂಧವರನ್ನು ಮರಳಿ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕರೆ ತರುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ರೈತ ಪರವಾದ ಕಾರ್ಯಕ್ರಮಗಳನ್ನು ರೂಪಿಸಿ ರೈತನ ಬೆಳೆದ ಕೃಷಿ ಹುಟ್ಟುವಳಿಗಳಿಗೆ ವೈಜ್ಞಾನಿಕವಾಗಿ ದರವನ್ನು ನಿಗದಿ ಪಡಿಸುವ ಮೂಲಕ ಕೃಷಿ ಚಟುವಟಿಕೆಯಿಂದ ದೂರ ಸರಿಯುತ್ತಿರುವ ರೈತ ಬಾಂಧವರನ್ನು ಮರಳಿ ಕೃಷಿಯತ್ತ ಕರೆತರುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಮೈಸೂರು ಆಕಾಶವಾಣಿಯ ಬಾನಲ್ಲಿ ಕೃಷಿ ಬೆಳಗು ಕಾರ್ಯಕ್ರಮದ ನಿರ್ವಾಹಕರಾದ ಕೇಶವಮೂರ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರೈತ ಬಾಂಧವರು ನಮ್ಮ ಪೂರ್ವಿಕರು ಬೇಸಾಯ ಮಾಡುತ್ತಿದ್ದ ಶೂನ್ಯ ಬಂಡವಾಳದ ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುವ ಮೂಲಕ ಕೃಷಿಯನ್ನು ಲಾಭದಾಯಕ ಕಸುಬನಾಗಿಸಿಕೊಂಡು, ರಾಸಾಯನಿಕ ಹಾಗೂ ಕ್ರಿಮಿನಾಶಕಗಳಿಂದ ಮುಕ್ತವಾದ ಉತ್ತಮ ಗುಣಮಟ್ಟದ ಆಹಾರವನ್ನು ಉತ್ಪಾದನೆ ಮಾಡಿಕೊಡುವ ಮೂಲಕ ಬೇಸಾಯ ಎಂಬ ಪದಕ್ಕೆ ಸಾರ್ಥಕತೆಯನ್ನು ತಂದುಕೊಡಬೇಕು ಎಂದು ಮನವಿ ಮಾಡಿದವರು.

ಭೂಮಿತಾಯಿಯನ್ನು ನಂಬಿ ಶ್ರದ್ದಾ ಭಕ್ತಿಯಿಂದ ಬೇಸಾಯ ಮಾಡುವವರನ್ನು ಭೂತಾಯಿಯು ಎಂದಿಗೂ ಕೈಬಿಟ್ಟ ಉದಾಹರಣೆಯೇ ಇಲ್ಲ, ನಾವು ಮಾಡುವ ಕೆಲಸದಲ್ಲಿ ನಂಬಿಕೆ ಮತ್ತು ಶ್ರದ್ಧೆ ಇದ್ದರೆ ಮಾತ್ರ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಿದೆ ಈ ದಿಕ್ಕಿನಲ್ಲಿ ರೈತಬಾಂಧವರು ಕೃಷಿ ತಜ್ಞರ ಸಲಹೆ ಸೂಚನೆಗಳನ್ನು ಪಡೆದುಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಿ ಹೆಚ್ಚಿನ ಇಳುವರಿ ಯನ್ನು ಪಡೆದುಕೊಳ್ಳುವ ಜೊತೆಗೆ ಕೃಷಿ ಚಟುವಟಿಕೆಗಳಿಂದ ನಷ್ಟ ಹೊಂದಿ ಕೃಷಿ ಚಟುವಟಿಕೆಗಳಿಂದ ವಿಮುಖರಾಗುವ ಆಲೋಚನೆ ಮಾಡಬಾರದು ಕಷ್ಟಪಟ್ಟು ಬೆವರು ಹರಿಸಿ ಬೇಸಾಯ ಮಾಡುವ ರೈತನ ಕಸುಬು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಕಸುಬಾಗಿದೆ. ರೈತರು ದೇಶದ ಬೆನ್ನೆಲುಬು ಮಾತ್ರವಲ್ಲದೆ, ನಿಜವಾದ ಶ್ರಮಿಕರಾಗಿದ್ದು, ಭೂಮಿಯನ್ನು ಉತ್ತಿ ಬಿತ್ತಿ ಬೇಸಾಯ ಮಾಡುತ್ತಿರುವ ಉಳುವ ಯೋಗಿಗಳಾಗಿದ್ದಾರೆ ಎಂದು ಕೇಶವಮೂರ್ತಿ ಅಭಿಮಾನದಿಂದ ಹೇಳಿದರು.

ಮಂಡ್ಯ ಜಿಲ್ಲಾ ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಅವರು ಇಂದಿನ ಬೇಸಾಯ ಚಟುವಟಿಕೆಗಳಲ್ಲಿ ಸಾವಯವ ಬೇಸಾಯ ಪದ್ದತಿಯ ಮಹತ್ವ ಕುರಿತು ಪ್ರಧಾನ ಭಾಷಣ ಮಾಡಿದರು.

ಕೃಷ್ಣರಾಜಪೇಟೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟಕಹಳ್ಳಿ ಎನ್.ಎಸ್.ಗಂಗಾಧರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಮ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷ ಜಾನಕಿರಾಮು, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಪ್ರಗತಿಪರ ಕೃಷಿಕರಾದ ಬಿ ನಂಜಪ್ಪ, ಲೋಕ ಪಾವನಿ ಮಹಿಳಾ ಬ್ಯಾಂಕ್ ಅಧ್ಯಕ್ಷ ಸುಜಾತ ಕೃಷ್ಣ, ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಮಂಜುಳಾ, ಉಪಾಧ್ಯಕ್ಷ ಬೋರೇಗೌಡ, ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಬೇದ್ರೆ ಮಂಜುನಾಥ, ಕೃಷ್ಣರಾಜಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಪುಟ್ಟೇಗೌಡ, ಕರ್ನಾಟಕ ರಾಜ್ಯ ಮಾರಾಟ ಸಹಕಾರ ಮಹಾ ಮಂಡಳಿಯ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್, ರಾಜ್ಯ ಪ್ರಶಸ್ತಿ ಪುರಸ್ಕೃತ ರೈತರಾದ ವಿಠಲಾಪುರ ಸುಬ್ಬೇಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕೆ.ಆರ್. ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಹಳ್ಳಿ ಜವರಾಯಿ ಗೌಡ, ಮೈಸೂರಿನ ಸಮುದ್ಯತಾ ಶೊತೃ ಸಂಘದ ಅಧ್ಯಕ್ಷ ಕಣ್ಣೂರು ವಿ.ಗೋವಿಂದಾಚಾರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಜೆ.ಸಂತೋಷ್ ಕುಮಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತರಾದ ಮಗ್ಗೆಮನೆ ಡಾ.ಎಂ.ಸಿ. ರಂಗಸ್ವಾಮಿ ಸೇರಿದಂತೆ ಸಾವಿರಾರು ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಪ್ರಗತಿಪರ ಕೃಷಿಕರಾದ ಮಾಲತಿ ಬಸವೇಗೌಡ, ಸುಮಿತ್ರ ಸೋಮಶೇಖರ್, ಜಿ.ಸಿ. ಪ್ರೇಮಕುಮಾರಿ, ವಿಜಯಮ್ಮ ನಾಗಣ್ಣ ಅವರಿಗೆ ಶ್ರೇಷ್ಠ ರೈತ ಮಹಿಳೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!