ಭಟ್ಕಳ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಜಾತ್ರೆಯಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಹಲವು ದಶಕಗಳ ಇತಿಹಾಸ ಹೊಂದಿರುವ ಹಳೆಯ ದೇವಸ್ಥಾನ ಕಟ್ಟಡದಲ್ಲಿ ನಡೆಯುವ ಇದೇ ಕೊನೆಯ ಜಾತ್ರೆಯಾಗಿದ್ದು, ಮುಂದಿನ ವರ್ಷಗಳಿಂದ ಜಾತ್ರೆಯನ್ನು ಪರ್ಯಾಯ ಮಂದಿರದಲ್ಲಿ ಆಯೋಜಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ಮಾಹಿತಿ ನೀಡಿದರು.
ಸಚಿವ ಮಂಕಾಳ ಎಸ್. ವೈದ್ಯ ಅವರ ನಿರಂತರ ಪ್ರಯತ್ನದ ಫಲವಾಗಿ ಸುಮಾರು ₹10 ಕೋಟಿ ವೆಚ್ಚದಲ್ಲಿ ನೂತನ ಭವ್ಯ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಲಭಿಸಿದ್ದು, ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ಮೂಲಕ ಸೋಡಿಗದ್ದೆ ಮಹಾಸತಿ ದೇವಿಯ ದೇವಸ್ಥಾನಕ್ಕೆ ಶಾಶ್ವತ ಸ್ವರೂಪ ನೀಡುವ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ದೇವಸ್ಥಾನ ಹಾಗೂ ಜೀರ್ಣೋದ್ಧಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ವಿಡಿಯೋಗಳು ದೇವಸ್ಥಾನದ ಸಂಪ್ರದಾಯ ಮತ್ತು ಆಡಳಿತ ಮಂಡಳಿಯ ಕಾರ್ಯವೈಖರಿಯ ವಿರುದ್ಧವಾಗಿವೆ ಎಂದು ಸ್ಪಷ್ಟಪಡಿಸಲಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಅಪಪ್ರಚಾರ ಅಥವಾ ತಪ್ಪು ಅರ್ಥಗರ್ಭಿತ ವಿಡಿಯೋಗಳು ಪ್ರಸಾರವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿವೆ.
ಈ ಬಾರಿ ಜಾತ್ರೆಯನ್ನು ಇನ್ನಷ್ಟು ವ್ಯವಸ್ಥಿತ ಹಾಗೂ ಭಕ್ತಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ವಿಶೇಷ ವಿದ್ಯುತ್ ಅಲಂಕಾರ, ಜಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ, ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ವಿಸ್ತಾರವಾದ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಭಕ್ತರು ಹಾಗೂ ವ್ಯಾಪಾರಸ್ಥರಿಗೆ ಯಾವುದೇ ಅಸೌಕರ್ಯವಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಲಾಯಿತು.
ಜಾತ್ರೆಯ ಅಂಗವಾಗಿ ನಡೆಯುವ ಅಂಗಡಿ ಹರಾಜುಗಳನ್ನು ಜನವರಿ 9ರಂದು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಭಾಗವಹಿಸಿ ಸಹಕಾರ ನೀಡುವಂತೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಾಗರಾಜ ನಾಯ್ಕ, ಕಾರ್ಯದರ್ಶಿ ರಮೇಶ ದೇವಡಿಗ, ಖಜಾಂಚಿ ಚನ್ನಯ್ಯ ಮೊಗೇರ ಸೇರಿದಂತೆ ಮಂಜು ಮೊಗೇರ, ಮೋಹನ ನಾಯ್ಕ, ಗೋವಿಂದ ನಾಯ್ಕ, ತಿಮ್ಮಪ್ಪ ನಾಯ್ಕ, ವರ್ಗ ಮೊಗೇರ, ಶಂಕರ ಮೊಗೇರ, ಮಾದೇವ ನಾಯ್ಕ, ಗುರುದಾಸ ಮೊಗೇರ, ಚೊಳರಾಜ ಮೊಗೇರ, ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಹಳೆಯ ಕಟ್ಟಡದೊಂದಿಗೆ ಭಕ್ತರ ನೆನಪುಗಳಿಗೆ ವಿದಾಯ ಹೇಳಿ, ನೂತನ ಭವ್ಯ ದೇವಸ್ಥಾನದತ್ತ ಹೆಜ್ಜೆ ಇಡುವ ಸಂಕ್ರಮಣ ಹಂತದ ಜಾತ್ರೆಯಾಗಿ ಈ ವರ್ಷದ ಮಹಾಸತಿ ದೇವಿಯ ಜಾತ್ರೆ ಇತಿಹಾಸದ ಮಹತ್ವದ ತಿರುವಾಗಿ ದಾಖಲಾಗಲಿದೆ ಎಂಬ ಅಭಿಪ್ರಾಯ ಭಕ್ತ ವಲಯದಲ್ಲಿ ವ್ಯಕ್ತವಾಗಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ