November 19, 2025

ಅಡಿಕೆ ಕಳ್ಳತನ ಪ್ರಕರಣ ಭೇದನೆ : ನಾಲ್ವರು ಬಂಧನ, ಒಬ್ಬ ಪರಾರಿ 175 ಕೆ.ಜಿ. ಅಡಿಕೆ, ಕಾರು ವಶ

ಭಟ್ಕಳ: ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಗೊಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತರು ಮೊಹಮ್ಮದ್ ಸಾಧಿಕ್ ಶೇಖ (26), ಮೊಹಮ್ಮದ್ ಖಾಜಾ (20) (ಬಿಳಾಲಖಂಡ ಗುಳ್ಳೆ), ಮೊಹಮ್ಮದ್ ಇರ್ಶಾದ್ (28), ಮೊಹಮ್ಮದ್ ಮುಸಾದಿಕ್ (36) (ಮೂಸಾನಗರ). ಪರಾರಿ ಆರೋಪಿ ಮೊಹಮ್ಮದ್ ನಿಜಾಮ್ ಹೆಬಳೆ.

ಪೊಲೀಸರ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ಸಾಧಿಕ್ ಶೇಖ ಮತ್ತು ಖಾಜಾ, ನಾಗಪ್ಪಯ್ಯ ಭಟ್ಟ ಅವರ ಹೊಸ ಮನೆಯ ಟೈಲ್ಸ್ ಹಾಕುವ ಕಾಮಗಾರಿ ನಡೆಸುತ್ತಿದ್ದಾಗ, ಪಕ್ಕದ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲವನ್ನು ಗಮನಿಸಿದ್ದರು. ಬಳಿಕ ತಮ್ಮ ಸಹಚರರ ಸಹಾಯದಿಂದ ಕೆಲ ದಿನಗಳ ನಂತರ ಮಧ್ಯರಾತ್ರಿ ಆ ಮನೆಗೆ ನುಗ್ಗಿ ಅಡಿಕೆ ಚೀಲ ಕದ್ದೊಯ್ದಿದ್ದರು.

ಮನೆಯ ಮಾಲಿಕ ನಾಗಪ್ಪಯ್ಯ ಭಟ್ಟ ಅವರು ಜುಲೈನಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಅವರಿಂದ 175 ಕೆ.ಜಿ. ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪರಾರಿ ಆರೋಪಿಯ ಬಂಧನಕ್ಕಾಗಿ ಶೋಧ ಮುಂದುವರಿದಿದ್ದು, ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ ಎ. ಲಿಂಗಾರೆಡ್ಡಿ, ಎಎಸ್‌ಐ ಗಣಪತಿ ಬೆನಕಟ್ಟಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

About The Author

error: Content is protected !!