
ಭಟ್ಕಳ: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ 5,000ಕ್ಕೂ ಹೆಚ್ಚು ನವಾಯತ್ ಸಮುದಾಯದ ಅನಿವಾಸಿ ಭಾರತೀಯರಿಂದ ಪ್ರತಿವರ್ಷ 1,000 ಕೋಟಿಗೂ ಅಧಿಕ ವಿದೇಶಿ ವಿನಿಮಯವನ್ನು ತಮ್ಮ ತಾಯ್ನಾಡಿಗೆ ಕಳುಹಿಸುತ್ತಿದ್ದಾರೆ. ಇದೇ ಆರ್ಥಿಕ ಶಕ್ತಿಯು ಭಟ್ಕಳದ ಸಮೃದ್ಧಿ ಮತ್ತು ಪ್ರಗತಿಯ ಮೂಲಾಧಾರವಾಗಿದೆ ಎಂದು ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್ (ರಾಬಿತಾ ಸೊಸೈಟಿ) ಪ್ರಧಾನ ಕಾರ್ಯದರ್ಶಿ ಅತೀಕ್ ಉರ್ ರೆಹಮಾನ್ ಮುನಿರಿ ಹೇಳಿದರು.
ಅವರು ಮಂಗಳವಾರ ಸಂಜೆ ಇಲ್ಲಿನ ರಾ.ಹೆ.66ರಲ್ಲಿನ ಖಾಜಿಯಾ ಬಂಗ್ಲೆ (ಮೌಲಾನಾ ಬಂಗಲೆ) ಯಲ್ಲಿ ರಾಬಿತಾ ಸೊಸೈಟಿಯ ಆಶ್ರಯದಲ್ಲಿ ಆಯೋಜಿಸಲಾದ ರಾಬಿತಾ ಸೌಹಾರ್ದ ಸಂಗಮ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.ಅರ್ಧ ಶತಮಾನದ ಹಿಂದೆ ಭಟ್ಕಳದ ಜನರು ಗಲ್ಫ್ ದೇಶಗಳಿಗೆ ತೆರಳಿ, ಅಲ್ಲಿ ಜಮಾತ್‌ಗಳನ್ನು ಸ್ಥಾಪಿಸಿ ಒಗ್ಗೂಡಿದರು. ಈ ಜಮಾತ್‌ಗಳ ಆಧಾರದ ಮೇಲೆ 1991ರಲ್ಲಿ ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್ ರಚನೆಯಾಯಿತು. ಈ ಕೌನ್ಸಿಲ್‌ನ ಕಲ್ಪನೆಯನ್ನು ಸಮುದಾಯದ ಮುಖಂಡರಾದ ದಿವಂಗತ ಎಸ್.ಎಂ. ಸಯ್ಯದ್ ಖಲೀಲ್ ಉರ್ ರೆಹಮಾನ್ ಮಂಡಿಸಿದ್ದರು. ಈ ಕೌನ್ಸಿಲ್ ಭಟ್ಕಳದಲ್ಲಿ ರಾಬ್ತಾ ಸೊಸೈಟಿಯಾಗಿ ನೋಂದಾಯಿತು ಎಂದ ಮುನಿರಿ, ರಾಬಿತಾ ಸೊಸೈಟಿಯು ಆರಂಭದಿAದಲೂ ಹಿಂದೂ-ಮುಸ್ಲಿA ಐಕ್ಯತೆಯನ್ನು ಬಲಪಡಿಸಲು ಶ್ರಮಿಸುತ್ತಿದೆ. ಈ ಉದ್ದೇಶದಿಂದ ಪ್ರತಿವರ್ಷ ಸೌಹಾರ್ದ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಆದರೆ, ಕೋವಿಡ್ ಮತ್ತು ಇತರ ಕಾರಣಗಳಿಂದ ಎಂಟು ವರ್ಷಗಳ ಕಾಲ ಈ ಕಾರ್ಯಕ್ರಮಕ್ಕೆ ವಿರಾಮ ಸಿಕ್ಕಿತ್ತು. ಈಗ ಮತ್ತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೊಸ ತಲೆಮಾರಿನವರು ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟಿನ ಉತ್ತೇಜನಕ್ಕೆ ಕೊಡುಗೆ ನೀಡಬೇಕು ಎಂದು ಮುನಿರಿ ಕರೆ ನೀಡಿದರು.
ಅಂಜುಮನ್ ಹಾಮಿ ಇ ಮುಸ್ಲಿಮೀನ್‌ನ ಅಧ್ಯಕ್ಷ ಹಾಗೂ ಖ್ಯಾತ ಎನ್‌ಆರ್‌ಐ ಉದ್ಯಮಿ ಮುಹಮ್ಮದ್ ಯೂನುಸ್ ಕಾಜಿಯಾ ಮತ್ತು ಮಜ್ಲಿಸ್ ಇಸ್ಲಾಹ್ ವ ತಂಜೀಮ್‌ನ ಅಧ್ಯಕ್ಷ ಇನಾಯತುಲ್ಲಾ ಶಾಬಂದರಿ ಅವರು ಸಾರ್ವಜನಿಕ ಸಮಸ್ಯೆಗಳನ್ನು ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳ ಮುಂದಿಟ್ಟರು.ಇನಾಯತುಲ್ಲಾ ಶಾಬಂದರಿ, ಕೆಲವು ನಗರಗಳ ಪತ್ರಕರ್ತರು ಭಟ್ಕಳದ ಮುಸ್ಲಿಮರ ಚಿತ್ರಣವನ್ನು ತಪ್ಪಾಗಿ ಚಿತ್ರಿಸಿ, ಇಲ್ಲಿನ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ, ಭಟ್ಕಳದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಯಾವತ್ತೂ ಪ್ರೀತಿ ಮತ್ತು ಸೌಹಾರ್ದದಿಂದ ಬಾಳುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ನವಾಯತ್ ಸಮುದಾಯದವರುಪ್ರತಿಭಾವಂತರಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಉತ್ಕೃಷ್ಟ ಸಾಧನೆ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆ ಇದೆ. ಯುವಕರು ಸರ್ಕಾರಿ ಕ್ಷೇತ್ರದಲ್ಲೂ ಮುಂದೆ ಬಂದು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.ಭಟ್ಕಳ ಉಪವಿಭಾಗಾಧಿಕಾರಿ ಕಾವ್ಯ ರಾಣಿ, ಜಿಲ್ಲಾ ಅರಣ್ಯಾಧಿಕಾರಿ ಯೋಗೀಶ್, ಭಟ್ಕಳ ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗ ರೆಡ್ಡಿ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತ ರಾಜೇಶ್ ನಾಯ್ಕ್ ಸೇರಿದಂತೆ ಇತರರು ರಾಬ್ತಾ ಸೊಸೈಟಿಯ ಸೇವೆಗಳನ್ನು ಮತ್ತು ಭಟ್ಕಳದ ಜನರ ಐಕ್ಯತೆಯನ್ನು ಶ್ಲಾಘಿಸಿದರು.
ಭಟ್ಕಳ ಸರ್ಕಾರಿ ಆಸ್ಪತ್ರೆಯ ಉಸ್ತುವಾರಿ ಡಾ. ಸವಿತಾ ಕಾಮತ್, ಹಿಂದೂ ಮತ್ತು ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ಶಾಲೆಗಳು ಮತ್ತು ಸಂಘಟನೆಗಳಿರುವುದರಿAದ ಎರಡೂ ಸಮುದಾಯದ ಮಕ್ಕಳು ಪರಸ್ಪರ ಸನಿಹಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದರು. ಕೆಲವು ಮಾಧ್ಯಮಗಳು ಭಟ್ಕಳವನ್ನು ಕೆಟ್ಟದ್ದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿವೆ ಎಂದು ಟೀಕಿಸಿದರು.
ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ್ ನಾಯ್ಕ್, ಮುಸ್ಲಿಮರೊಂದಿಗೆ ತಮ್ಮ ದೀರ್ಘಕಾಲದ ಸಂಬAಧವಿದೆ ಎಂದು ಹೇಳಿದರು. ನವಾಯತ್ ಸಮುದಾಯದ ಯುವತಿಯರು ಉನ್ನತ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಆದರೆ, ಅವರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಉನ್ನತ ಶಿಕ್ಷಣ ಪಡೆದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದು ರಾಬಿತಾ ಸೊಸೈಟಿಗೆ ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಪುತ್ರಿ, ಕಾಂಗ್ರೆಸ್ ಮುಖಂಡೆ ಬೀನಾ ವೈದ್ಯ, ಭಟ್ಕಳದ ಶ್ರೇಷ್ಠ ಗುಣವೆಂದರೆ ಇಲ್ಲಿನ ಸೌಹಾರ್ದತೆ. ಆದರೆ, ಕೆಲವರು ಈ ಐಕ್ಯತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಒಗ್ಗಟ್ಟೇ ಅವರಿಗೆ ತೊಡಕಾಗಿದೆ ಎಂದರು. ತಮ್ಮ ತಂದೆ ಭಟ್ಕಳ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ದಿನರಾತ್ರಿ ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಸ್ತಾಪಿತ ಸಮಸ್ಯೆಗಳನ್ನು ತಮ್ಮ ತಂದೆಗೆ ತಿಳಿಸುವ ಭರವಸೆ ನೀಡಿದರು.
ರಾಬಿತಾ ಸೊಸೈಟಿಯ ಅಧ್ಯಕ್ಷ ಉಮರ್ ಫಾರೂಕ್ ಮುಸ್ಬಾಹ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಕಮರ್ ಸಾದಾ ಧನ್ಯವಾದ ಸಮರ್ಪಿಸಿದರು. ಗಲ್ಫ್ ನ ವಿವಿಧ ಜಮಾಅತ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು,ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ