August 30, 2025

ಅಳ್ಳಂಕಿ ಕಾಲೇಜಿನಲ್ಲಿ ತಾಲುಕಾ ಮಟ್ಟದ ಭಾಷಣ ಸ್ಪರ್ಧೆ

ಹೊನ್ನಾವರ : ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ದಿ.ಎಂ.ಪಿ.ನಾಡಕರ್ಣಿ ಸ್ಮರಣಾರ್ಥ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಲೋಕಮಾನ್ಯ ತಿಲಕರ ಪಾತ್ರ ಈ ವಿಷಯದ ಬಗ್ಗೆ ಹೊನ್ನಾವರ ತಾಲೂಕಿನ ವಿವಿಧ ಕಾಲೇಜುಗಳ ಹತ್ತು ಸ್ಪರ್ಧಾಳುಗಳು ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ಸುಬ್ರಹ್ಮಣ್ಯ ಹೆಗಡೆ ಅವರು, ಲೇಖನವನ್ನೇ ಅಸ್ತ್ರವಾಗಿಸಿ ಬ್ರಿಟಿಷರ ವಿರುದ್ಧ ಪ್ರಬಲವಾಗಿ ಹೋರಾಡಿದ ಲೋಕಮಾನ್ಯ ತಿಲಕರ ಬಹುಮುಖ ವ್ಯಕ್ತಿತ್ವದ ವೀರಚರಿತ್ರೆಯ ಕುರಿತು ಮಾತನಾಡಿ, " ಇಂದಿನ ವಿದ್ಯಾರ್ಥಿಗಳು ಭಾರತದ ಸ್ವಾತಂತ್ರ‍್ಯ ಚಳವಳಿಯ ಕತೆಗಳಿಂದ ಸ್ಫೂರ್ತಿ ಪಡೆದು ದೇಶಪ್ರೇಮ ಬೆಳೆಸಿಕೊಳ್ಳಬೇಕು. ತರಗತಿಯಲ್ಲಿ ಆಗದ್ದನ್ನು ಇಂತಹ ಕಾರ್ಯಕ್ರಮಗಳ ಮೂಲಕ ಕಟ್ಟಿಕೊಡಬಹುದು " ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ ಎಸ್ ಹೆಗಡೆಯವರು , ಉತ್ತರ ಕನ್ನಡ ಜಿಲ್ಲೆಯ ಉಪ್ಪಿನ ಸತ್ಯಾಗ್ರಹ, ಕಾನಗೋಡು ಜಂಗಲ್ ಸತ್ಯಾಗ್ರಹ, ಬೋಸ್ಟನ್ ಟೀ ಪಾರ್ಟಿ ನೆನಪಿಸುವ ಹೈಗುಂದದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಅಳ್ಳಂಕಿಯ ದಿ. ಎಂ.ಪಿ. ನಾಡಕರ್ಣಿಯವರ ತ್ಯಾಗ ಗುಣಗಳನ್ನು ಸ್ಮರಿಸಿ, ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.


ಇಡಗುಂಜಿ ಕಾಲೇಜಿನ ಕಾವ್ಯಾ ನಾಯ್ಕ ಪ್ರಥಮ, ಎಸ್.ಡಿ.ಎಮ್ ಕಾಲೇಜಿನ ವೈಷ್ಣವಿ ನಾಯ್ಕ ದ್ವಿತೀಯ, ಕಾಂತಿ ಹೆಗಡೆ ತೃತೀಯ ಸ್ಥಾನ ಪಡೆದರು. ಮಾಜಿ ಸೈನಿಕ ವಿನಾಯಕ ನಾಯ್ಕ ಹಾಗೂ ಅಂಬೇಡ್ಕರ್ ವಸತಿ ಶಾಲಾ ಪ್ರಾಚಾರ್ಯ ಶ್ರೀನಿವಾಸ ನಾಯ್ಕ , ಚಂದ್ರಶೇಖರ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.
ಸ್ವಾತಿ ಮುಕ್ರಿ ಸ್ವಾಗತಿಸಿದರು. ಕಿಶೋರ್ ನಾಯ್ಕ ವಂದಿಸಿದರು ಮಹೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

About The Author