September 4, 2025

ಭಟ್ಕಳದಲ್ಲಿ ಅದ್ದೂರಿ ಗಣೇಶ ವಿಸರ್ಜನೆ, ಶಾಂತಿಯುತವಾಗಿ ಮುಕ್ತಾಯ

ಭಟ್ಕಳ: ತಾಲೂಕಿನ ವಿವಿಧೆಡೆಗಳಲ್ಲಿ ಐದು ದಿನಗಳಿಂದ ಪೂಜಿಸಲ್ಪಟ್ಟ ಗಣೇಶನನ್ನು ಭಕ್ತಿಭಾವದಿಂದ ವಿಜೃಂಭಣೆಯ ಮೆರವಣಿಗೆಯೊಂದಿಗೆ ಭಾನುವಾರ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಭಟ್ಕಳದಲ್ಲಿ ಶಿಬಿರ ಹಾಕಿ ಭದ್ರತೆ ಮೇಲ್ವಿಚಾರಣೆ ನಡೆಸಿದರು.

ರಿಕ್ಷಾ ಯೂನಿಯನ್, ವಿಶ್ವಹಿಂದು ಪರಿಷತ್, ಕೆಎಸ್‌ಆರ್‌ಟಿಸಿ ನೌಕರರು, ಪೊಲೀಸ್ ಇಲಾಖೆ ಹಾಗೂ ಮಣ್ಕುಳಿ ಸಾರ್ವಜನಿಕ ಗಣಪತಿ ಸೇರಿದಂತೆ ಅನೇಕ ಗಣೇಶ ಮೂರ್ತಿಗಳು ಭಟ್ಕಳ ಹಳೆ ಬಸ್ ನಿಲ್ದಾಣದಿಂದ ಮಾರಿಕಾಂಬಾ ದೇವಸ್ಥಾನದ ಮಾರ್ಗವಾಗಿ ಚೌಥನಿಯ ಕುದುರೆ ಬೀರಪ್ಪ ಹೊಳೆಯಲ್ಲಿ ಭಕ್ತಿ, ಶ್ರದ್ಧೆ ಹಾಗೂ ಶಾಂತಿಯುತವಾಗಿ ವಿಸರ್ಜಿಸಲ್ಪಟ್ಟವು.

ಕಳೆದ ವರ್ಷದ ಹೋಲಿಸಿದರೆ ಈ ಬಾರಿ ಡಿಜೆ ಸದ್ದು ಗಣನೀಯವಾಗಿ ಕಡಿಮೆಯಾಗಿದ್ದು, ಯುವಕರಲ್ಲಿ ಸ್ವಲ್ಪ ನಿರಾಶೆ ಮೂಡಿಸಿದಂತಾಯಿತು. ಭದ್ರತೆಯ ನಿಟ್ಟಿನಲ್ಲಿ ಎಸ್‌ಪಿ ದೀಪನ್ ಎಂ.ಎನ್. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಹೇಶ್, ಸಿಪಿಐ ದಿವಾಕರ ಹಾಗೂ ಪಿಎಸೈ ನವೀನ್ ನಾಯ್ಕ ಮತ್ತು ತಿಮ್ಮಪ್ಪ ಮೊಗೇರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವನ್ನು ಕೂಡ ನಿಯೋಜಿಸಲಾಗಿತ್ತು. ಪುರಸಭೆಯ ವತಿಯಿಂದ ಚೌಥನಿ ಹೊಳೆ ಪ್ರದೇಶದಲ್ಲಿ ಲೈಟಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ದಾಹ ತೀರಿಸಲು ಚೌತನಿಯ ಶಂದಾರ್ ಸೂಪರ್ ಮಾರ್ಕೆಟ್‌ನ ಮುಸ್ಲಿಂ ವ್ಯಾಪಾರಿಯೋರ್ವರು ನೀರು ಹಂಚಿ ಮಾನವೀಯತೆ ಮೆರೆದಿದ್ದು ಎಲ್ಲರ ಗಮನ ಸೆಳೆಯಿತು.

About The Author

error: Content is protected !!