September 5, 2025

‘ದೃಷ್ಟಿ’- ಕಣ್ಣಿನ ಉಚಿತ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ

ಹೊನ್ನಾವರ: ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಬೆಂಗಳೂರು ಮತ್ತು ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹಾಗೂ ಹೊನ್ನಾವರ ರೈತ ಉತ್ಪಾದಕ ಕಂಪನಿ ಲಿಮಿಟೆಡ್, ಹಡಿನಬಾಳ ಇವರ ಸಂಯುಕ್ತ ಆಶ್ರಯದಲ್ಲಿ ‘ದೃಷ್ಟಿ’- ಕಣ್ಣಿನ ಉಚಿತ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ತಾಲೂಕಿನ ಖರ್ವಾ ಗ್ರಾಮ ಪಂಚಾಯತ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಬೆಂಗಳೂರು ಇದರ ಮುಖ್ಯ ವ್ಯವಸ್ಥಾಪಕ ಧರ್ಮಪ್ರಸಾದ ರೈ ಮಾತನಾಡಿ, ನಮ್ಮ ಕಂಪನಿ ಗುಣಮಟ್ಟದಲ್ಲಿ ನಂಬರ್ ಒನ್ ಕನ್ನಡಕ ಲೆನ್ಸ್ ತಯಾರಿಕಾ ಕಂಪನಿಯಾಗಿದೆ. ಆದರೆ ನಮ್ಮ ಉತ್ಪನ್ನ ಎಲ್ಲರಿಗೂ ಲಭಿಸುತ್ತಿಲ್ಲ. ಅದಕ್ಕಾಗಿ ಒನ್‌ಸೈಟ್ ಎಸ್ಸಿಲಾರ್‌ಲಕ್ಸೋಟಿಕಾ ಫೌಂಡೇಶನ್ ಮೂಲಕ ಸಂಘಸAಸ್ಥೆಗಳ ಸಹಯೋಗದೊಂದಿಗೆ ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಪಂದನ ಸಂಸ್ಥೆ ಕೈಜೋಡಿಸಿದೆ. ಉಚಿತ ಎಂದಾಕ್ಷಣ ಕಳಪೆ ಎನ್ನುವ ಅಭಿಪ್ರಾಯ ಇರುತ್ತದೆ. ಆದರೆ ಕಂಪನಿಯ ಗುಣಮಟ್ಟದ ಕನ್ನಡಕ ನೀಡುವಲ್ಲಿ ಯಾವುದೇ ಲೋಪ ಆಗದು ಎಂದು ಭರವಸೆ ನೀಡಿದರು. ಕನ್ನಡಕ ಬಳಸುವುದರಿಂದ ಅಂಧತ್ವ ಉಂಟಾಗುವುದನ್ನು ತಪ್ಪಿಸಬಹುದು. ಮುಖದ ಸೌಂದರ್ಯಕ್ಕೆ ಅಥವಾ ವ್ಯಂಗ್ಯವಾಡುತ್ತಾರೆ ಎಂದು ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸಬೇಡಿ. ದೃಷ್ಟಿ ದೋಷವಾದಲ್ಲಿ ವೈದ್ಯರಿಂದ ಪರೀಕ್ಷಿಸಿಕೊಂಡು ಕನ್ನಡಕ ಬಳಸಿ ಎಂದು ಸಲಹೆ ನೀಡಿದರು.

ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಯೋಗಶಾಲಾ ತಂತ್ರಜ್ಞ ವಿನಾಯಕ ನಾಯ್ಕ ಮಾತನಾಡಿ, ದೃಷ್ಟಿ ಸಮಸ್ಯೆ ಎನ್ನುವುದು ಅನೇಕ ರೀತಿಯಲ್ಲಿ ಕೌಟುಂಬಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಕನ್ನಡಕ ಇಲ್ಲವಾದಲ್ಲಿ ದೈನಂದಿನ ಕೆಲಸಕಾರ್ಯಗಳಿಗೆ ಅಡೆತಡೆಯಾಗುತ್ತದೆ. ಮಾನಸಿಕವಾಗಿ ವಿಚಲಿತರಾಗುತ್ತಾರೆ. ದೃಷ್ಟಿ ದೋಷ ಉಂಟಾದಲ್ಲಿ ಕನ್ನಡಕ ಬಳಸುವುದು ರೂಡಿಸಿಕೊಳ್ಳಿ ಎಂದರು.

ಶ್ರೀ ಸಿದ್ದಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಹೆಗಡೆ ಮಾತನಾಡಿ, ಒನ್‌ಸೈಟ್ ಎಸ್ಸಿಲಾರ್‌ಲಕ್ಸೋಟಿಕಾ ಕಂಪನಿ ಗುಣಮಟ್ಟದ ಸೇವೆಯ ಜತೆಗೆ, ಉಚಿತ ಕನ್ನಡಕ ನೀಡುವ ಮೂಲಕ ಭಾವನಾತ್ಮಕವಾಗಿಯೂ ನಂಬರ್ ಒನ್ ಆಗಿದೆ. ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖರ್ವಾ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ನಾಯ್ಕ, ಗ್ರಾಮೀಣ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಸ್ಪಂದನ ಸಂಸ್ಥೆ ಇಂತಹ ಜನಪರ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.

ಹೊನ್ನಾವರ ರೈತ ಉತ್ಪಾದಕ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಎನ್ ಎಸ್ ಹೆಗಡೆ, ಪಿಡಿಒ ರಮೇಶ ನಾಯ್ಕ ಉಪಸ್ಥಿತರಿದ್ದರು. ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಕಾಶ ನಾಯ್ಕ ಸ್ವಾಗತಿಸಿದರು. ಶೈಲೇಶ್ ನಾಯ್ಕ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!