ಗೋಕರ್ಣ: 2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗೋಕರ್ಣ ಮೂಲದ ಪ್ರತಿಭೆ ಪ್ರತ್ಯೂಷಾ ಕುಮಾರ್ ಆಯ್ಕೆಯಾಗಿರುವುದು ಕರಾವಳಿ ಭಾಗದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಮೂಲತಃ ಗೋಕರ್ಣದ ರಥಬೀದಿಯಲ್ಲಿರುವ ಜಂಭೆ ಮನೆತನದವರಾದ ಪ್ರತ್ಯೂಷಾ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ತಮ್ಮ 14ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಆರಂಭಿಸಿದ್ದು, ಹಂತ ಹಂತವಾಗಿ ಬೆಳೆದು ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಮಿಂಚಿದ್ದರು. ಕರ್ನಾಟಕ ರಾಜ್ಯ ತಂಡದ ಪರವಾಗಿ ಆಡುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ.
10 ಲಕ್ಷಕ್ಕೆ ಆರ್‌ಸಿಬಿ ಪಾಲು:
26 ವರ್ಷದ ಪ್ರತ್ಯೂಷಾ ಕುಮಾರ್ ಅವರು ಒಬ್ಬ ಪ್ರತಿಭಾವಂತ ವಿಕೆಟ್‌ಕೀಪರ್ ಹಾಗೂ ಆಕ್ರಮಣಕಾರಿ ಬಲಗೈ ಬ್ಯಾಟರ್ ಆಗಿದ್ದಾರೆ. ವಿಕೆಟ್‌ಗಳ ಹಿಂದೆ ತಮ್ಮ ಚುರುಕಾದ ಕೀಪಿಂಗ್ ಕೌಶಲ್ಯ ಹೊಂದಿರುವ ಇವರನ್ನು ಆರ್‌ಸಿಬಿ ಫ್ರಾಂಚೈಸಿಯು 10 ಲಕ್ಷ ರೂಪಾಯಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ.
ಡಬ್ಲ್ಯೂಪಿಎಲ್‌ನಲ್ಲಿ ಇವರು ಇನ್ನೂ ‘ಅನ್‌ಕ್ಯಾಪ್ಡ್’ (ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡದ) ಆಟಗಾರ್ತಿಯಾಗಿದ್ದರೂ, ಅವರ ದೇಶೀಯ ಕ್ರಿಕೆಟ್ ಅನುಭವವನ್ನು ಪರಿಗಣಿಸಿ ಆರ್‌ಸಿಬಿ ಮಣೆ ಹಾಕಿದೆ.
ತವರಿನ ತಂಡಕ್ಕೆ ನಮ್ಮೂರಿನ ಹುಡುಗಿ ಆಯ್ಕೆಯಾಗಿರುವುದು ಗೋಕರ್ಣ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಂತಾಗಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಪ್ರತ್ಯೂಷಾ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಸ್ಥಳೀಯರು ಹಾಗೂ ಕ್ರಿಕೆಟ್ ಪ್ರೇಮಿಗಳು ಹಾರೈಸಿದ್ದಾರೆ.

More Stories
ಬರ್ಗಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಇಲಾಖಾ ಸಂಸ್ಕೃತ ಕಾರ್ಯಗಾರ
ಬರ್ಗಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ರ್ಯಾಂಕ್
“ಛಾತ್ರಮುಖಿ” – ಸಂಸ್ಕೃತ ಅಭ್ಯಾಸ ಪುಸ್ತಕದ ಲೋಕಾರ್ಪಣೆ