January 14, 2026

ಬರ್ಗಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಇಲಾಖಾ ಸಂಸ್ಕೃತ ಕಾರ್ಯಗಾರ


ನೇತೃತ್ವ ವಹಿಸಿದ ಡಯಟ್ ಪ್ರಾಚಾರ್ಯರು – ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಉಪಸ್ಥಿತರಿದ್ದ ನಾಲ್ವರು ಹಿರಿಯ ಉಪನ್ಯಾಸಕರು


ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠ, ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ತುಮಕೂರಿನ ರಾಮಕೃಷ್ಣ- ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕ – ಇವುಗಳ ಸಂಯುಕ್ತ ಆಶ್ರಯದಲ್ಲಿ “ವಿವೇಕ ವರ್ಧಂತಿ” ಯೊಂದಿಗೆ “ವಿವೇಕಮುಖಿ”- ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಸಂಸ್ಕೃತ ಶಿಕ್ಷಕರ ಇಲಾಖಾ ಕಾರ್ಯಗಾರವು ಅದ್ದೂರಿಯಾಗಿ ನಡೆಯಿತು.


ಡಯಟ್ ನ ಪ್ರಾಚಾರ್ಯರಾದ ಎನ್.ಆರ್.ಹೆಗಡೆಯವರ ನೇತೃತ್ವದಲ್ಲಿ, ಉಪ ಪ್ರಾಚಾರ್ಯರಾದ ಜಿ. ಎಸ್. ಭಟ್, ಹಿರಿಯ ಉಪನ್ಯಾಸಕರಾದ ಚಂದ್ರಹಾಸ ರಾಯ್ಕರ್, ನಾಗರಾಜ ಗೌಡ ಹಾಗೂ ಆರ್. ಎಲ್. ಭಟ್ ರವರನ್ನೊಳಗೊಂಡಂತೆ ಐವರು ಡಯಟ್ ನ ಅಧಿಕಾರಿಗಳಲ್ಲದೇ, ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕರವರು ಸೇರಿದಂತೆ, ಒಟ್ಟೂ ಆರು ಜನ ಎ ದರ್ಜೆಯ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಡೀ ದಿನ ಬರ್ಗಿ ಪ್ರೌಢ ಶಾಲೆಯಲ್ಲಿ ಉಪಸ್ಥಿತರಿದ್ದು, ಈ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಸಂಸ್ಕೃತ ವಿಷಯ ಶಿಕ್ಷಕರ ಇಲಾಖಾ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು.


ಬಾಡ – ಕಾಗಲಿನ ಜನತಾ ವಿದ್ಯಾಲಯದ ಐ.ವಿ.ಭಟ್, ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಗೀತಾ ಈಶ್ವರ ಭಟ್, ವನ್ನಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಸುವರ್ಣಾ ಬಂಟ್,ಮಲ್ಲಾಪುರದ ರಾಮಚಂದ್ರ ಮಡಿವಾಳ,ಕುಮಟಾದ ಸಿ. ವಿ. ಎಸ್. ಕೆ. ಪ್ರೌಢ ಶಾಲೆಯ ಸುರೇಶ ಹೆಗಡೆ, ಹಡಿನಬಾಳ ಪ್ರೌಢ ಶಾಲೆಯ ಗೀತಾ ಹೆಗಡೆ,ಕತಗಾಲದ ಎಸ್. ಕೆ. ಪಿ. ಪ್ರೌಢ ಶಾಲೆಯ ಸಂಪೂರ್ಣ ನಾಯ್ಕ, ಮಿರ್ಜಾನ್ ಬಿಜಿಎಸ್ ನ ಸುಮಂಗಲಾ ವೈದ್ಯ,ಅರೆಅಂಗಡಿಯ ರಮ್ಯಾ ಭಟ್, ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢ ಶಾಲೆಯ ಸುಬ್ರಹ್ಮಣ್ಯ ಭಟ್, ಬಂಕಿಕೊಡ್ಲದ ಪರಮೇಶ್ವರ ಹೆಗಡೆ, ಮುರೂರಿನ ಪ್ರಗತಿ ವಿದ್ಯಾಲಯದ ಸುಬ್ರಾಯ ಶಾಸ್ತ್ರಿ, ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಮಂಜುನಾಥ ಗಾಂವಕರ್ ಬರ್ಗಿ, ಗೋಕರ್ಣದ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶ್ರೀಧರ ಹೆಗಡೆ ಹಾಗೂ ಹಿರೇಗುತ್ತಿಯ ಸೆಕಂಡರಿ ಸ್ಕೂಲ್ ನ ಭರತ್ ಭಟ್ ಮೊದಲಾದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಪ್ರಜ್ಞಾವಂತ ಪ್ರೌಢ ಶಾಲಾ ಸಂಸ್ಕೃತ ಶಿಕ್ಷಕರಲ್ಲದೇ, ಮಿರ್ಜಾನ್-ಕೋಡ್ಕಣಿಯ ಜನತಾ ವಿದ್ಯಾಲಯದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಸಂಸ್ಕೃತ ಶಿಕ್ಷಕರಾದ ರಾಜು ನಾಯ್ಕ ಹಾಗೂ ಹಡಿನಬಾಳದ ಸರ್ಕಾರಿ ಪ್ರೌಢ ಶಾಲೆಯ ನಿವೃತ್ತ ಸಂಸ್ಕೃತ ಶಿಕ್ಷಕಿ ಸುಜಾತಾ ದೇವರಭಾವಿ ಹಾಗೂ ಮುಗ್ವಾದ ಸಂಸ್ಕೃತ ಉಪನ್ಯಾಸಕಿ ಡಾ. ಶ್ರೀದೇವಿ ಭಟ್ ರವರ ಜೊತೆಯಲ್ಲಿ ಕುಮಟಾ – ಹೊನ್ನಾವರ – ಅಂಕೋಲಾ ತಾಲ್ಲೂಕುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸಂಸ್ಕೃತಾಮಾನಿಗಳು ಕಾರ್ಯಾಗಾರದಲ್ಲಿ ತುಂಬಾ ಉತ್ಸುಕತೆಯಿಂದ ಪಾಲ್ಗೊಂಡಿದ್ದರು.


ಉಪ ಪ್ರಾಚಾರ್ಯರಾದ ಜಿ. ಎಸ್. ಭಟ್ ರವರು ಶ್ರೀ ಮಹಲಿಂಗೇಶ್ವರ ಸ್ವಾಮಿಯ ಲಾಂಛನಕ್ಕೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನಗೈದು, ವಿವೇಕಾನಂದರ ಜನ್ಮ ದಿನದಂದು ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಪುಣ್ಯ ನೆಲದಲ್ಲಿ ಜಿಲ್ಲೆಯ ಸುಸಂಸ್ಕೃತ ಸಂಸ್ಕೃತ ಶಿಕ್ಷಕರ ಜೊತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕಳೆಯುವ ಭಾಗ್ಯದ ಪ್ರಾಪ್ತಿಯು ಪೂರ್ವಜನ್ಮದ ಸುಕೃತವೆಂದರು.


ಕುಂದಾಪುರದ ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹರೀಶ ನಾಯಕರವರು ದೀಪ ಪ್ರಜ್ವಲನಗೈದು ಸಭೆಯನ್ನು ಉದ್ಘಾಟಿಸಿ, ವಿವೇಕಾನಂದರಂತಹ ಮಹಾತ್ಮರ ಸೃಷ್ಟಿಯಲ್ಲಿ ಪರಮಹಂಸರಂತಹ ಶ್ರೇಷ್ಠ ಗುರುಗಳು ನೀಡಿರುವ ಕೊಡುಗೆಯಂತೆ, ಕ್ರಿಯಾಶೀಲ ಸಂಸ್ಕೃತ ಶಿಕ್ಷಕರಿಂದ ಸಂಸ್ಕಾರವಂತ ನಾಗರಿಕರು ನಿರ್ಮಾಣವಾಗುತ್ತರೆಂದು ಸಂಸ್ಕೃತದ ಕಲಿಕೆಗೆ ಕರೆಗೊಟ್ಟರು.


ಎಸ್ ಎಸ್ ಎಲ್ ಸಿ ಯಲ್ಲಿ ತೃತೀಯ ಭಾಷೆಯಾಗಿ ಸಂಸ್ಕೃತವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗಿ ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರೊಂದಿಗೆ, ಬಾಡದ ಜನತಾ ವಿದ್ಯಾಲಯದ ಹಿರಿಯ ಶಿಕ್ಷಕರಾದ ಐ.ವಿ. ಭಟ್ಟರವರು ಮತ್ತು ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲಿನ ಸಂಸ್ಕೃತ ಶಿಕ್ಷಕಿ ಗೀತಾ ಭಟ್ ರವರು ಜೊತೆಯಾಗಿ ರಚಿಸಿರುವ ಕುಮಟಾ ಡಯಟ್ ನಿಂದ ಪ್ರಕಾಶಿತವಾದ “ಛಾತ್ರಮುಖಿ”- ಫಲಿತಾಂಶಮುಖಿ ಅಭ್ಯಾಸ ಹೊತ್ತಿಗೆಯನ್ನು ವಿದ್ಯಾಪೋಷಕ ಬೇಲೇಕೇರಿಯ ಕೆ.ಆರ್. ನಾಯಕರವರು ಅನಾವರಣಗೊಳಿಸಿ,ಸಂಸ್ಕೃತದ ತಲಸ್ಪರ್ಶಿಯಾದ ಅಧ್ಯಯನದಿಂದ ವಿವೇಕಾನಂದರು ಅಪರೂಪದ ವ್ಯಕ್ತಿತ್ವವಾಗಿ ನಿರ್ಮಾಣವಾದ ಬಗೆಯನ್ನು ಸೋಡಾಹಾರನಪೂರ್ವಕವಾಗಿ ವಿವರಿಸಿದರು.


ಇದೇ ಸಂದರ್ಭದಲ್ಲಿ 2025 ರ ನವೆಂಬರದಲ್ಲಿ ತುಮಕೂರಿನ ರಾಮಕೃಷ್ಣ -ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ” ವಿವೇಕ ವಿದ್ಯಾರ್ಥಿ ” ಪರೀಕ್ಷೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕಾ ಮಟ್ಟದ ಸ್ಥಾನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಆಶ್ರಮದ ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿಗಳಾದ ಡಾ. ಶ್ರೀದೇವಿ ಭಟ್ ರವರು ವಿತರಿಸಿ, ವಿವೇಕಾನಂದರನ್ನು ಓದಿಕೊಂಡು ಉತ್ತಮ ವ್ಯಕ್ತಿತ್ವವಾಗಿ ಆಕಾರಗೊಂಡು, ಸಮಾಜಕ್ಕೆ ಮಾದರಿಯಾಗಬೇಕೆಂದರು.


ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕರವರು ಡಯಟ್ ನಿಂದ ಆಯೋಜಿತವಾದ ಜಿಲ್ಲಾ ಮಟ್ಟದ ಸಂಸ್ಕೃತ ಕಾರ್ಯಗಾರವು ಸಕಾಲಿಕವೆಂದರಲ್ಲದೇ, ಸದುಪಯೋಗಪಡಿಸಿಕೊಂಡುಉತ್ತಮವಾದ ಫಲಿತಾಂಶವನ್ನು ನೀಡಲು ಕರೆ ನೀಡಿದರು.
ಡಯಟ್ ನ ಹಿರಿಯ ಉಪನ್ಯಾಸಕರಾದ ಚಂದ್ರಹಾಸ ರಾಯ್ಕರರವರು ತಾನು ಹಿಂದೆ ಮುಖ್ಯಾಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ ಬರ್ಗಿ ಪ್ರೌಢ ಶಾಲೆಯೊಂಡಿಗಿನ ತನ್ನ ಮಧುರವಾದ ನೆನಪುಗಳನ್ನು ಮೆಲಕು ಹಾಕುತ್ತ, ಮಂಜುನಾಥ ಬರ್ಗಿಯವರ ಅದ್ವೈರ್ಯದಲ್ಲಿ ಬರ್ಗಿ ಪ್ರೌಢ ಶಾಲೆಯು ಸಂಸ್ಕೃತ ಜಾಗೃತಿಯ ಕೇಂದ್ರವಾಗುತಿದ್ದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.


ತಾಲ್ಲೂಕಾ ಪಂಚಾಯತ್ ದ ನಿಯೋಜಿತ ಕಾರ್ಯ ನಿರ್ವಹಣಾಧಿಕಾರಿಗಳಾದ ಹಿರಿಯ ಉಪನ್ಯಾಸಕರಾಗಿರುವ ರಾಜೇಂದ್ರ ಭಟ್ ರವರು ಸಂಸ್ಕೃತ ಶಿಕ್ಷಕರೆಲ್ಲರೂ ಸುಸಂಸ್ಕೃತ ಶಿಕ್ಷಕರಾಗಿದ್ದು, ಸಂಸ್ಕೃತದ ಗಟ್ಟಿ ನೆಲದಲ್ಲಿ ಡಯಟ್ ನಿಂದ ಸಂಸ್ಕೃತದ ಇಲಾಖಾ ಕಾರ್ಯಾಗಾರವನ್ನು ಏರ್ಪಡಿಸಿದ ಬಗ್ಗೆ ಮಹದಾನಡವನ್ನು ವ್ಯಕ್ತಪಡಿಸಿದರು.


ಅಭ್ಯಾಗತರಾಗಿ ಆಗಮಿಸಿದ್ದ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸುಧೀರ ನಾಯಕರವರು ಸಂಸ್ಕೃತವನ್ನು ಓದುವುದು ಮತ್ತು ಬೋಧಿಸುವುದು ಬೌದ್ಧಿಕ ತೃಷೆಯನ್ನು ನೀಗಿಸಲು ಬಹು ಉಪಯುಕ್ತವೆಂದರು.
ಸಂಸ್ಕೃತದ ಹಾಗೂ ವಿವೇಕಾನಂದರ ಅಪಾರ ಅಭಿಮಾನಿಯಾದ ಖ್ಯಾತ ಹಿರಿಯ ನ್ಯಾಯವಾದಿಗಳಾದ ವಿ. ಎಸ್. ನಾಯಕ ಕಣಗಿಲ್ ರವರು ಬರ್ಗಿ ಪ್ರೌಢ ಶಾಲೆಯಲ್ಲಿ ವಿವೇಕಾನಂದರ ಜನ್ಮದಿನದಂದೇ ಜಿಲ್ಲಾ ಮಟ್ಟದ ಸಂಸ್ಕೃತ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಡಯಟ್ ತನ್ನೊಳಗಿನ ವಿವೇಕ ಪ್ರಜ್ಞೆಯನ್ನು ಸಶಕ್ತವಾಗಿ ವ್ಯಕ್ತಪಡಿಸಿದೆ ಎಂದರು.


ಸಭಾಧ್ಯಕ್ಷತೆಯನ್ನು ವಹಿಸಿದ ಡಯಟ್ ನ ಪ್ರಾಚಾರ್ಯರಾದ ಎನ್. ಆರ್. ಹೆಗಡೆಯವರು ಬರ್ಗಿ ಪ್ರೌಢ ಶಾಲೆಯಲ್ಲಿ ಡಯಟ್ ನಿಂದ ಸಂಸ್ಕೃತ ವಿಷಯದ ಜಿಲ್ಲಾ ಮಟ್ಟದ ಇಲಾಖಾ ಕಾರ್ಯಗಾರವನ್ನು ಸಂಘಟಿಸಿರುವಲ್ಲಿ-ತಾತ್ವಿಕ ತಳಪಾಯದ ಮೇಲೆ ಸುಲಭವಾಗಿ ಅಂಕಗಳಿಕೆಯ ಆಶಯವಿದ್ದು, ಕಾರ್ಯಗಾರಕ್ಕೆ ಆಗಮಿಸಿ ಉಪಯೋಗವನ್ನು ಪಡೆದ ಶಿಕ್ಷಕರನ್ನು ಶ್ಲಾಘಸಿ, ಅನುಮತಿಯ ಮೇರೆಗೆ ಕಾರ್ಯಾಗಾರದಲ್ಲಿ ಅನುಪಸ್ಥಿತರಿದ್ದ ಶಿಕ್ಷಕರಿಗೆ ಗುಣಾತ್ಮಕವಾದ ಫಲಿತಾಂಶವನ್ನು ನೀಡುವ ಸೂಚನೆಯನ್ನು ನೀಡಿರುವುದಾಗಿ ಹೇಳಿದರು.


ನಿವೃತ್ತ ಸಂಸ್ಕೃತ ಶಿಕ್ಷಕರಾದ ರಾಜು ನಾಯ್ಕ ಹಾಗೂ ಸುಜಾತಾ ದೇವರಬಾವಿಯವರನ್ನು ಸನ್ಮಾನಿಸಲಾಯಿತು.
ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕರವರು ಸ್ವಾಗತಿಸಿದರು. ಶಿಕ್ಷಕಿ ಗೀತಾ ನಾಗೇಕರ್ ರವರು ವಂದಿಸಿದರು. ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಬರ್ಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಗೀತಾ ಭಟ್ ರವರು “ಛಾತ್ರಮುಖಿ” ಕೃತಿಯನ್ನು ಪರಿಚಯಿಸಿದರು. ಐ. ವಿ. ಭಟ್ ರವರು ನಿರೂಪಿಸಿದರು.


ಅಂಕೋಲಾ ತಾಲ್ಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಸಂಚಾಲಕರಾದ ವಿಜಯಕುಮಾರ್, ಕೋಶಧ್ಯಕ್ಷರಾದ ಶಿವಚಂದ್ರ ಹಾಗೂ ರಾಜೇಂದ್ರ ಕೇಣಿ ಮೊದಲಾದವರಿದ್ದರು.


ಪಂಚ ಬಾಲ ವಿವೇಕಾನಂದರ ವೇಷಧಾರಿಗಳು ವಿಶೇಷವಾದ ಗಮನವನ್ನು ಸೆಳೆದರು.
ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಪ್ರಾಯೋಜಕತ್ವವನ್ನು ವಹಿಸಿ, ಉದಾರವಾದ ನೆರವನ್ನು ನೀಡಿದ ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್, ಬರ್ಗಿಯವರಿಗೆ, ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗರಾಜ ಕೃಷ್ಣ ನಾಯ್ಕರವರಿಗೆ ಹಾಗೂ ವಿದ್ಯಾರ್ಥಿ-ಪಾಲಕರಾದ ನಾಗನೆಲೆಯ ನಾರಾಯಣ ನಾಗು ನಾಯಕರವರಿಗೆ ಡಯಟ್ ನಿಂದ ವಿಶೇಷವಾದ ಧನ್ಯವಾದಗಳನ್ನು ಸಲ್ಲಿಸಲಾಯಿತು.

About The Author

error: Content is protected !!