March 2, 2026

ಕೋಗ್ತಿ ಶ್ರೀ ಜಟಗಾ ಮಹಾಸತಿ ದೇವಿಯ ಜಾತ್ರೆ

ಭಟ್ಕಳ: ತಾಲೂಕಿನ ಸಮಸ್ತ ಗೊಂಡ ಸಮುದಾಯದವರ ಆರಾಧ್ಯ ದೈವ, ಇಲ್ಲಿನ ಕೋಗ್ತಿ ಶ್ರೀ ಜಟಗಾ ಮಹಾಸತಿ ದೇವಿಯ ಜಾತ್ರೆಯು ಶ್ರದ್ಧಾ ಭಕ್ತಿ ಸಂಭ್ರಮದೊಂದಿಗೆ  ನೆರವೇರಿತು.


ತಾಲೂಕಿನಲ್ಲಿ ಮಕರ ಸಂಕ್ರಾಂತಿಯ ಆನಂತರ ನಡೆಯುವ ಎರಡನೇ ಜಾತ್ರೆ ಇದಾಗಿದೆ. ಕೋಕ್ತಿ ಮಹಾಸತಿ ದೇವಸ್ಥಾನದಲ್ಲಿ ಪಟ್ಟಣದ ಮಧ್ಯದಲ್ಲಿದ್ದು, ಇದು ಇಂದಿಗೂ ಗ್ರಾಮೀಣ ಪದ್ಧತಿಯಲ್ಲೇ ನಡೆದುಕೊಂಡು ಬರುತ್ತಿದೆ. ಗೊಂಡ ಸಮಾಜದ ಜಾನಪದ ಶೈಲಿಯಲ್ಲಿ ಈ ಜಾತ್ರೆ ನಡೆಯಲಿದ್ದು, ದೇವಸ್ಥಾನವೂ ಪ್ರಮುಖವಾಗಿ ಗೊಂಡ ಸಮಾಜದವರೇ ನಂಬಿಕೊಂಡು ಬಂದ ಸ್ಥಳವಾಗಿದೆ. ಪ್ರತಿ ವರ್ಷದ ಜಾತ್ರೆಯಲ್ಲಿಯೂ ಸಂಪ್ರದಾಯಕ್ಕೆ ಧಕ್ಕೆ ಬರದಂತೆ ಜಾತ್ರೆ ಆಚರಿಸಿಕೊಂಡು ಹೋಗಲಾಗುತ್ತಿದೆ. ಪಟ್ಟಣದ ಮಧ್ಯದಲ್ಲಿ ಈ ಜಾತ್ರೆ ನಡೆಯುತ್ತಿದ್ದರೂ ಗ್ರಾಮೀಣ ಭಾಗದ ಜನರೇ ಹೆಚ್ಚಾಗಿ ಇಲ್ಲಿ ಭಾಗವಹಿಸುತ್ತಾರೆ.
ಜಾತ್ರೆಯಲ್ಲಿ ಕಬ್ಬಿನ ಕುಡಿಯನ್ನು ಖರೀದಿಸುವುದು ಒಂದು ಪದ್ಧತಿಯಾಗಿದೆ. ಇಲ್ಲಿ ಕಬ್ಬಿನ ಕುಡಿಯನ್ನು ಕೊಂಡುಕೊಳ್ಳುವುದಕ್ಕೂ ಒಂದು ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಸುಗ್ಗಿಯ ಸಂಭ್ರಮದಲ್ಲಿರುವ ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಜಾತ್ರೆಯಲ್ಲಿ ಬಂದು ಮನೆ ಮನೆಗೆ ಕಬ್ಬು ಕೊಂಡೊಯ್ಯಲಿ, ಆ ಕುಡಿಯು ಸಹಸ್ರ ಕುಡಿಯಾಗಿ ಮನೆ ಯಜಮಾನನ ಸಂಪತ್ತು ವೃದ್ಧಿಯಾಗಲಿ ಎನ್ನುವುದು ಹಿಂದಿನಿಂದ ಬಂದ ಪದ್ಧತಿಯಾಗಿದೆ.

ಇನ್ನೊಂದು ಪ್ರತೀತಿಯೆಂದರೆ ಜಾತ್ರೆಯ ನಂತರ ಮುಂದಿನ ಜಾತ್ರೆಯ ತನಕ ಮದುವೆಯಾಗಿರುವ ಗೊಂಡ ಸಮಾಜದ ನೂತನ ವಧೂ-ವರರು ಜಾತ್ರೆಗೆ ಬಂದು ಇಲ್ಲಿನ ಕೋಕ್ತಿ ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಪಡೆದು ವಾಪಸು ಮನೆಗೆ ಹೋಗುವಾಗ ಕಬ್ಬಿನ ಕುಡಿಯನ್ನು ತೆಗೆದುಕೊಂಡು ಹೋದರೆ ಅವರ ಕುಟುಂಬದ ಕುಡಿ ಮುಂದುವರಿಯುವುದು ಎನ್ನುವ ನಂಬಿಕೆ ಕೂಡಾ ಇಲ್ಲಿ ಅಡಗಿದೆ. ಆದರೆ ಕೆಲವು ವರ್ಷಗಳಿಂದ ಕೋಕ್ತಿ ಕೆರೆಯಲ್ಲಿ ಹೂಳು ತುಂಬಿ ನೀರು ಕಲುಷಿತಗೊಂಡಿದ್ದರಿಂದ ಸ್ನಾನ ಮಾಡಲು ಯೋಗ್ಯವಾಗಿಲ್ಲವಾದ್ದರಿಂದ ಸ್ನಾನ ಮಾಡುವ ಪದ್ಧತಿಯನ್ನು ನಿಲ್ಲಿಸಲಾಗಿದೆ. ಹಲವರು ನಂಬಿಕೆ ಪ್ರತೀಕವಾಗಿ ಕೆರೆಯ ನೀರನ್ನು ಪ್ರೋಕ್ಷಣ್ಯ ಮಾಡಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಾರೆ. 
ಇಲ್ಲಿ ಮಹಾಸತಿ ದೇವರ ಪೂಜೆ, ಶೇಡಿ ಮರದ ಪೂಜೆ ವಿಶೇಷ ಹರಕೆಯಾಗಿದೆ.


ಗುಡಿಜಟಗಾ ದೇವಸ್ಥಾನದಲ್ಲಿ ರುಂಡ ಪೂಜೆ ಸಲ್ಲಿಸಿ
 ದೇವಸ್ಥಾನದಿಂದ ದೈವಾರಾಧನೆ ಮತ್ತು ಗೊಂಡರ ಸಾಂಪ್ರದಾಯಿಕ ಡಕ್ಕೆ ಕುಣಿತದೊಂದಿಗೆ  ರುಂಡಗಳನ್ನು ಮೆರವಣಿಗೆಯ ಮೂಲಕ ಕೋಕ್ತಿಯಲ್ಲಿ ಶ್ರೀ ಮಹಾಸತಿ ಪಾದದಡಿ ರುಂಡಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು.
ಜಾತ್ರೆಯಂದು ಭಕ್ತರು ದೇವಸ್ಥಾನಕ್ಕೆ ಬಂದು ತಮ್ಮ ಹರಕೆ, ಕಾಣಿಕೆಯನ್ನು ಸಲ್ಲಿಸುತ್ತಾರೆ.
ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಮೆರುಗು ದೇವಸ್ಥಾನದ ಆವರಣದಲ್ಲಿ ಹೂವು ಹಣ್ಣು, ತಿಂಡಿ ತಿನ್ನಿಸು. ಆಟಿಕೆ ಸಾಮಾನುಗಳು, ಸಿಹಿ ತಿನ್ನಿಸುಗಳ ಅಂಗಡಿಗಳು ಕೋಗ್ತಿ ಜಾತ್ರೆಗೆ ವಿಶೇಷ ಮೆರುಗನ್ನು ನೀಡಿದವು, ಗೊಂಡ ಸಮುದಾಯದವರಲ್ಲದೇ ಇತರೇ ವರ್ಗದವರು ಜಾತ್ರೆಯನ್ನು ಕೂಡಿಕೊಂಡರು.


ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕೋಗಿ ಮಹಾಸತಿ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಕಮೀಟಿ ಅಧ್ಯಕ್ಷ ರಾಘವೇಂದ್ರ ಗೊಂಡ,ಸಮಾಜದ ಹಿರಿಯರಾದ ಸೋಮಯ್ಯ ಗೊಂಡ,ಬಡಿಯ ಗೊಂಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಾತ್ರೆಯ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಡಿವೈಎಸ್ಪಿ ಮಹೇಶ್ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.

About The Author

error: Content is protected !!